ಬೆಂಗಳೂರು : ವಿಧಾನಪರಿಷತ್ ಸಭಾನಾಯಕಿಯಾಗಿ ಡಾ| ಜಯಮಾಲಾ ಅವರನ್ನು ನೇಮಿಸುವ ಪ್ರಸ್ತಾಪಕ್ಕೆ ವಿಧಾನಪರಿಷತ್ ಹಿರಿಯ ಸದಸ್ಯರ ಅಸಮಾಧಾನ ಮುಂದುವರೆದಿದ್ದು, ಭಾನುವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಗೆ ಪರಿಷತ್‌ನಿಂದ ಮತ್ತೊಬ್ಬ ಹಿರಿಯ ಸದಸ್ಯರಿಗೆ ಸಚಿವ ಸ್ಥಾನ ನೀಡಿ ಸಭಾನಾಯಕ ಸ್ಥಾನದ ಜವಾಬ್ದಾರಿ ಕೊಡಬೇಕು ಎಂದು ಪರಿಷತ್ ಸದಸ್ಯರು ಮನವಿ ಮಾಡಿದ್ದಾರೆ.
 
ವಿಧಾನಪರಿಷತ್ ಸದಸ್ಯರಾದ ವಿ.ಎಸ್. ಉಗ್ರಪ್ಪ, ಮೋಹನ್ ಕುಮಾರ್ ಕೊಂಡಜ್ಜಿ, ನಾರಾಯಣಸ್ವಾಮಿ ಸೇರಿದಂತೆ ಹಲವರು ಕೆ.ಸಿ. ವೇಣುಗೋಪಾಲ್ ಅವರಿಗೆ ಮನವಿ ಪತ್ರ ನೀಡಿದ್ದಾರೆ. ವಿಧಾನಪರಿಷತ್ ಸದಸ್ಯೆ ಡಾ.ಜಯಮಾಲ ಅವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ಅವರು ಸಭಾನಾಯಕಿಯಾದರೆ ಹಿರಿಯ ಪರಿಷತ್ ಸದಸ್ಯರಿಗೆ ಕೆಲಸ ಮಾಡಲು ಮುಜುಗರ ಉಂಟಾಗುತ್ತದೆ. ಜತೆಗೆ, ಜಯಮಾಲಾ ಅವರಿಗೆ ಸರ್ಕಾರವನ್ನು ಬಲವಾಗಿ ಸಮರ್ಥಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. 

ಹೀಗಾಗಿ, ಜಯಾಮಾಲ ಅವರ ಜತೆಗೆ ಸಚಿವ ಸಂಪುಟ ವಿಸ್ತರಣೆ ವೇಳೆ ಪರಿಷತ್‌ನ ಮತ್ತೊಬ್ಬ ಹಿರಿಯ ಸದಸ್ಯರಿಗೆ ಸಚಿವ ಸ್ಥಾನ ನೀಡಬೇಕು. ಹಿರಿಯ ಸದಸ್ಯರನ್ನು ಸಭಾನಾಯಕರನ್ನಾಗಿ ನೇಮಕ ಮಾಡಬೇಕು ಎಂದು ಮನವಿ ಪತ್ರದಲ್ಲಿ ಕೋರಿದ್ದಾರೆ ಎನ್ನಲಾಗಿದೆ. ಈ ಪತ್ರಕ್ಕೆ ಕೆಲ ಶಾಸಕರು ಹಾಗೂ ಹಿರಿಯ ವಿಧಾನಪರಿಷತ್ ಸದಸ್ಯರೂ ಸಹಿ ಹಾಕಿದ್ದಾರೆ. 

ಇದೇ ಪತ್ರದಲ್ಲಿ ನಿಗಮ-ಮಂಡಳಿ ನೇಮಕದಲ್ಲಿ 2 - 3 ವಿಧಾನಪರಿಷತ್ ಸದಸ್ಯರಿಗೂ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್‌ಗೆ ಸಭಾಪತಿ ಸ್ಥಾನ ಕೇಳಿ: ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನ 35 ಮಂದಿ ಸದಸ್ಯರಿದ್ದಾರೆ. ಹೀಗಾಗಿ ಸಭಾಪತಿ ಸ್ಥಾನ ಕಾಂಗ್ರೆಸ್‌ಗೆ ಪಡೆಯಬೇಕು. ಕಾಂಗ್ರೆಸ್‌ನಿಂದ ಸೂಕ್ತ ವ್ಯಕ್ತಿಯನ್ನು ಸಭಾನಾಯಕನನ್ನಾಗಿ ನೇಮಿಸಬೇಕು. ಈ ಬಗ್ಗೆ ಜೆಡಿಎಸ್ ಪಕ್ಷದೊಂದಿಗೆ ಸಭೆ ನಡೆಸಿ ಮನವೊಲಿಸಬೇಕು ಎಂದೂ ಮನವಿ ಮಾಡಿದ್ದಾರೆ.

ಜಯಮಾಲಾ ಕಣ್ಣೀರು?
ಹಿರಿಯ ವಿಧಾನಪರಿಷತ್ ಸದಸ್ಯರ ಅಸಮಾಧಾ ನದ ಬೆನ್ನಲ್ಲೇ ಸಚಿವೆ ಜಯಮಾಲಾ ಅವರು ಕೆ.ಸಿ. ವೇಣು ಗೋಪಾಲ್‌ರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ವೇಳೆ ನಮಗೆ ಅವಕಾಶ ನೀಡುವ ಮೊದಲೇ ಜವಾಬ್ದಾರಿ ನಿಭಾಯಿಸಲು ಶಕ್ತರಲ್ಲ ಎಂದು ಪ್ರಮಾಣಪತ್ರ ನೀಡುವುದು ಎಷ್ಟು ಸರಿ? ನಾನು ಕೂಡ ಪಕ್ಷಕ್ಕಾಗಿ ದುಡಿದಿದ್ದೇನೆ. ನಾನು ಜವಾಬ್ದಾರಿಯನ್ನು ನಿಭಾಯಿಸಬಲ್ಲೆ ಎಂದು ಹೇಳಿಕೊಂಡರು. ಇದೇ ವೇಳೆ ಜಯಾಮಾಲ ಅವರು ಕಣ್ಣೀರು ಹಾಕಿದರು ಎನ್ನಲಾಗಿದೆ.