ಬೆಳಗಾವಿ[ಡಿ.14]: ಟಿಪ್ಪು ಜಯಂತಿ ಆಚರಣೆ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಗುರುವಾರ ಉತ್ತರ ಕೊಡಿಸುವುದಾಗಿ ಹೇಳಿದ ವಿಷಯ ಅಜೆಂಡಾ ಪಟ್ಟಿಯಲ್ಲಿ ಸೇರ್ಪಡೆ ಮಾಡದೇ ಇರುವ ವಿಷಯ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ, ವಾಗ್ವಾದ, ಪ್ರತಿಭಟನೆಯಿಂದ ಮೂರು ಗಂಟೆಗಳ ಕಾಲ ಕಲಾಪ ಬಲಿಯಾಯಿತು.

ನಿನ್ನೆ ಸರ್ಕಾರ ಹೇಳಿದ ಪ್ರಕಾರ ಗುರುವಾರ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವ ವಿಷಯ ಅಜೆಂಡಾ ಪಟ್ಟಿಯಲ್ಲಿ ಸೇರ್ಪಡೆ ಮಾಡಿಲ್ಲ ಎಂದು ಪ್ರತಿಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ಉತ್ತರ ನೀಡಲು 15 ದಿನ ಕಾಲಾವಕಾಶ ಕಾಲಾವಕಾಶ ಕೇಳಿದ್ದಾರೆಂದು ಸಭಾಪತಿಗಳು ಹೇಳಿದರೂ ಸಮಾಧಾನಗೊಳ್ಳದ ಪ್ರತಿಪಕ್ಷದ ಸದಸ್ಯರು ನಿರ್ದಿಷ್ಟದಿನ ತಿಳಿಸುವಂತೆ ಪಟ್ಟು ಹಿಡಿದು ಧರಣಿ, ಪ್ರತಿಭಟನೆ ಮಾಡಿದರು.

ಕೊನೆಗೆ ಸಭಾಪತಿಗಳ ಮನವಿ ಮೇರೆಗೆ ಪ್ರತಿಪಕ್ಷದ ಸದಸ್ಯರು ಧರಣಿ ಹಿಂಪಡೆದು ತಮ್ಮ ಆಸನಕ್ಕೆ ಹೋಗತೊಡಗಿದಾಗ ಆಡಳಿತ ಪಕ್ಷದ ಕೆಲವು ಸದಸ್ಯರು ಶೇಮ್‌ ಶೇಮ್‌ ಎಂದು ಹೇಳಿದ್ದು ಪ್ರತಿಪಕ್ಷಗಳ ಪ್ರತಿಭಟನೆಗೆ ಕಾರಣವಾಗಿ 45 ನಿಮಿಷ ವ್ಯರ್ಥವಾಯಿತು.

ಬಳಿಕ ಸಭಾನಾಯಕಿ ಜಯಮಾಲಾ, ಈ ಪದ ಬಳಸಿದ್ದರೆ ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ಈ ವಿಷಯ ಇಲ್ಲಿಗೆ ಬಿಟ್ಟು, ಕಲಾಪ ನಡೆಸಲು ಅನುವು ಮಾಡಿಕೊಡಬೇಕು. ಟಿಪ್ಪು ಜಯಂತಿ ಆಚರಣೆ ಕುರಿತು ಬೆಳಗಾವಿ ಅಧಿವೇಶನದೊಳಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರಿಸುತ್ತಾರೆ ಎಂದು ತಿಳಿಸಿದರು. ನಂತರ ಪ್ರತಿಪಕ್ಷದ ಸದಸ್ಯರು ಪ್ರತಿಭಟನೆಯಿಂದ ಹಿಂದೆ ಸರಿದರು.

ಪ್ರಶ್ನೋತ್ತರ ಕಲಾಪ ಮುಗಿದ ಮೇಲೆ ಈ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬುಧವಾರ ಸಭಾನಾಯಕರು ಹೇಳಿದ ಪ್ರಕಾರ ಅಜೆಂಡಾದಿಂದ ಈ ವಿಷಯ ಕೈಬಿಟ್ಟಿದ್ದೇಕೆ, ಬೆಳಗ್ಗೆ ಸದನಕ್ಕೆ ಬಂದ ವೇಳೆ ಮುಖ್ಯಮಂತ್ರಿಗಳಿಂದ ಏಕೆ ಉತ್ತರ ಕೊಡಿಸಲಿಲ್ಲ ಎಂದು ಪ್ರಶ್ನಿಸಿದರು.

ಆಗ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಮುಖ್ಯಮಂತ್ರಿಗಳು ಕೆಲಸದ ಒತ್ತಡದಿಂದಾಗಿ 15 ದಿನ ಕೇಳಿದ್ದಾರೆ. ಅವರೊಂದಿಗೆ ಚರ್ಚೆ ಮಾಡಿಕೊಂಡು ಬಂದು ತಿಳಿಸುತ್ತೇನೆ. ಅಲ್ಲಿವರೆಗೂ ಸುಗಮವಾಗಿ ಸದನ ನಡೆಯಲಿ ಎಂದು ಕೋರಿದರು. ಆದರೆ ವಿಪಕ್ಷದ ಸದಸ್ಯರು, ಸರ್ಕಾರ ಹಾಗೆಲ್ಲ ಪಲಾಯನ ಮಾಡುವಂತಿಲ್ಲ. ಯಾವಾಗ ಉತ್ತರ ಕೊಡಿಸುತ್ತೀರಿ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಎರಡು ಪಕ್ಷಗಳ ಸದಸ್ಯರ ಮಧ್ಯ ವಾಗ್ವಾದ ನಡೆದು ಕೋಲಾಹಲ ಸೃಷ್ಟಿಯಾಯಿತು. ಯಾರು ಏನು ಮಾತನಾಡುತ್ತಿದ್ದಾರೋ ತಿಳಿಯದಂತಹ ಪರಿಸ್ಥಿತಿ ನಿರ್ಮಾಣವಾಯಿತು.

ಟಿಪ್ಪು ಜಯಂತಿ ಕುರಿತು ಸರ್ಕಾರ ಉತ್ತರಿಸಲು ಸಿದ್ಧವಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಬಳಿಕ ತಿಳಿಸುತ್ತೇನೆ ಎಂಬ ಕೃಷ್ಣ ಬೈರೇಗೌಡರ ಮಾತಿಗೆ ಮಣಿಯದ ಪ್ರತಿಪಕ್ಷಗಳ ಸದಸ್ಯರು ಯಾವಾಗ ನಮ್ಮ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರಿಸುತ್ತಾರೆ ಎಂಬುದನ್ನು ತಿಳಿಸಲೇಬೇಕೆಂದು ಪಟ್ಟು ಹಿಡಿದು ಬಾವಿಗಿಳಿದು ಧರಣಿ ಆರಂಭಿಸಿದರು. ಆಗ ಸಭಾಪತಿಗಳು ಊಟಕ್ಕೆ ವಿರಾಮ ನೀಡಿ ಕಲಾಪವನ್ನು ಮುಂದೂಡಿದರು.

ಊಟದ ನಂತರವೂ ವಿಪಕ್ಷ ಧರಣಿಯನ್ನು ಮುಂದುವರಿಸಿತು. ಆದರೆ ಸಚಿವರಾಗಲಿ, ಸಭಾಪತಿಗಳಾಗಲಿ ಕಲಾಪಕ್ಕೆ ಬಂದಿರಲಿಲ್ಲ. ಹೀಗಾಗಿ ಮತ್ತೆ ಐದು ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿದರು.

ಮತ್ತೆ ಕಲಾಪ ಆರಂಭವಾದಾಗ ವಿಪಕ್ಷದವರು ಧರಣಿಯನ್ನು ಮುಂದುವರಿಸಿದರು. ಆಗ ಸಭಾಪತಿ ಪ್ರತಾಪಚಂದ್ರ ಶೆಟ್ಟಿಧರಣಿ ಹಿಂಪಡೆಯುವಂತೆ ಮಾಡಿದ ಸೂಚನೆ ಅನ್ವಯ ಆಗ ವಿಪಕ್ಷದ ಸದಸ್ಯರು ಪ್ರತಿಭಟನೆಯನ್ನು ಹಿಂಪಡೆದು ತಮ್ಮ ಸ್ಥಾನಕ್ಕೆ ಬಂದು ಕುಳಿತುಕೊಂಡರು.

ಆಗ ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌, ಎನ್‌.ನಾರಾಯಣ ಸ್ವಾಮಿ ಹಾಗೂ ಕೆ.ಅಬ್ದುಲ್‌ ಜಬ್ಬಾರ ಈ ಮೂವರು ‘ಶೇಮ್‌ ಶೇಮ್‌’ ಎಂದು ಕೆಣಕಿದರು. ಇದು ವಿಪಕ್ಷದ ಸದಸ್ಯರನ್ನು ರೊಚ್ಚಿಗೆಬ್ಬಿಸಿತು. ಹೀಗಾಗಿ ಮತ್ತೆ ಬಾವಿಗಿಳಿದು ಧರಣಿ ಕುಳಿತರು. ಮತ್ತೆ ಸಭಾಪತಿಗಳು ಐದು ನಿಮಿಷಗಳ ಕಾಲ ಸಭೆ ಮುಂದೂಡಿದರು. ಆಗ ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರೆಲ್ಲರೂ ಪ್ರತ್ಯೇಕವಾಗಿ ಚರ್ಚೆ ನಡೆಸಿದರು. ಮುಂದೆ 45 ನಿಮಿಷಗಳ ಬಳಿಕ ಸಭೆ ಆರಂಭವಾಯಿತು.

ಸಭೆ ಆರಂಭವಾಗುತ್ತಿದ್ದಂತೆ ಧರಣಿ ಮುಂದುವರಿಸಿದ ವಿಪಕ್ಷದವರು, ಪೀಠದ ಆದೇಶದಂತೆ ಪ್ರತಿಭಟನೆ ಹಿಂಪಡೆದರೆ ಆಡಳಿತದವರು ಶೇಮ್‌ ಶೇಮ್‌ ಎಂದು ಪ್ರಚೋದನೆ ಮಾಡಿದ್ದಾರೆ. ಕೂಡಲೇ ಸರ್ಕಾರ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು.

ಆಗ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಹಾಗೊಂದು ಯಾರಾದರೂ ಸದಸ್ಯರು ಹೇಳಿದ್ದರೆ, ಅದು ಅಕ್ಷಮ್ಯ. ಅದನ್ನು ಕಡತದಿಂದ ತೆಗೆದು ಹಾಕಲಾಗುವುದು. ಜತೆಗೆ ಆ ಪದ ಬಳಿಸಿದ ಸದಸ್ಯರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.