ಚೆನ್ನೈ :  ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಆಸ್ಪತ್ರೆಯ ಸಿಸಿ ಕ್ಯಾಮರಾಗಳು ಸಕ್ರಿಯವಾಗಿದ್ದವು. ಆದರೆ ಸರ್ಕಾರಿ ಅಧಿಕಾರಿಯೊಬ್ಬರ ಕೋರಿಕೆಯ ಮೇರೆಗೆ ಕಾಕಕಾಲಕ್ಕೆ ಅವುಗಳನ್ನು ಸ್ವಿಚ್‌ಆಫ್‌ ಮಾಡಲಾಗುತ್ತಿತ್ತು ಎಂದು ಜಯಾ ಸಾವಿನ ತನಿಖೆ ನಡೆಸುತ್ತಿರುವ ಆರ್ಮುಗಸ್ವಾಮಿ ಆಯೋಗದ ಮುಂದೆ ಅಪೋಲೋ ಸಿಒಒ ಸುಬ್ಬಯ್ಯ ವಿಶ್ವನಾಥನ್‌ ಹೇಳಿದ್ದಾರೆ. ಇದರಿಂದಾಗಿ ಮತ್ತಷ್ಟುಅನುಮಾನಗಳು ಮೂಡಲು ಕಾರಣವಾಗಿದೆ.

ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ ಅವರು, ‘ಕೆಲವು ಸಂದರ್ಭಗಳಲ್ಲಿ ಸರ್ಕಾರಿ ಅಧಿಕಾರಿಯ ಕೋರಿಕೆಯ ಮೇರೆಗೆ ಸಿಸಿ ಕ್ಯಾಮರಾ ಸ್ವಿಚಾಫ್‌ ಮಾಡಲಾಗುತ್ತಿತ್ತು. ಜಯಾರನ್ನು ಒಂದು ವಾರ್ಡ್‌ನಿಂದ ಇನ್ನೊಂದು ವಾರ್ಡ್‌ಗೆ ಶಿಫ್ಟ್‌ ಮಾಡುವಾಗಲೆಲ್ಲ ಕ್ಯಾಮರಾ ಆಫ್‌ ಮಾಡಲು ಅಧಿಕಾರಿ ತಿಳಿಸುತ್ತಿದ್ದರು’ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಇನ್ನೊಂದು ವಾರದಲ್ಲಿ ಆ ಅಧಿಕಾರಿಯ ಹೆಸರು ಮತ್ತು ಬಾಕಿ ಸಿಸಿಟೀವಿ ಫುಟೇಜ್‌ಗಳನ್ನು ನೀಡುವಂತೆ ಸಿಒಒ ಅವರಿಗೆ ನ್ಯಾ. ಆರ್ಮುಗಸ್ವಾಮಿ ಅವರು ಸೂಚಿಸಿದರು. ಆದರೆ 2016ರ ಸಿಸಿಟೀವಿಗಳನ್ನು ಆಸ್ಪತ್ರೆಯವರು ಸಂಗ್ರಹಿಸಿಟ್ಟಿದ್ದಾರೋ ಇಲ್ಲವೋ ಎಂಬ ಬಗ್ಗೆ ತಮಗೆ ತಿಳಿದಿಲ್ಲ ಎಂದು ಸಿಒಒ ಹಾರಿಕೆ ಉತ್ತರ ನೀಡಿದರೆಂದು ಮಾಧ್ಯಮ ವರದಿಗಳು ಹೇಳಿವೆ.

ಇದೇ ವೇಳೆ, ಅಪೋಲೋ ಆಸ್ಪತ್ರೆಯ ಕೆಲವು ವೈದ್ಯರು ಹಾಗೂ ಸಿಬ್ಬಂದಿ ಸಮನ್ಸ್‌ಗೆ ಓಗೊಡದೇ ವಿಚಾರಣೆಯಿಂದ ದೂರ ಉಳಿದಿದ್ದಾರೆ. ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನ್ಯಾ.ಆರ್ಮುಗಸ್ವಾಮಿ ಎಚ್ಚರಿಸಿದ್ದಾರೆ. ವಿಚಾರಣೆ ತಪ್ಪಿಸಿದವರು ಸೆ.10ರಿಂದ 12ರ ಅವಧಿಯಲ್ಲಿ ಆಗಮಿಸಿ ತನಿಖೆ ಎದುರಿಸಬೇಕು ಎಂದು ಆಯೋಗ ಸೂಚಿಸಿದೆ.