Asianet Suvarna News Asianet Suvarna News

ಅಮಿತ್ ಶಾ ಪುತ್ರನಿಂದ ವೆಬ್'ಸೈಟ್ ಮೇಲೆ 100 ಕೋಟಿ ರೂ ಮಾನನಷ್ಟ ಮೊಕದ್ದಮೆ?

ಜಯ್ ಶಾ ಅವರ ಸಂಸ್ಥೆಯಿಂದ ನಡೆದಿರಬಹುದೆನ್ನಲಾದ ಅವ್ಯವಹಾರ ಸಾಧ್ಯತೆ ಬಗ್ಗೆ ವರದಿ ಮಾಡಿದವರು ದಿ ವೈರ್'ನ ರಿಪೋರ್ಟರ್ ರೋಹಿಣಿ ಸಿಂಗ್. 2011ರಲ್ಲಿ ರೋಹಿಣಿ ಸಿಂಗ್ ಎಕನಾಮಿಕ್ ಟೈಮ್ಸ್ ವರದಿಗಾರ್ತಿಯಾಗಿದ್ದಾಗ ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಅವರ ಡಿಎಲ್'ಎಫ್ ಹಗರಣವನ್ನು ಬಯಲಿಗೆ ತಂದಿದ್ದರು.

jay shah may file defamation case against the wire website

ನವದೆಹಲಿ(ಅ. 08): ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಅವರು ದ ವೈರ್ ವೆಬ್'ಸೈಟ್ ಮೇಲೆ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ಹಾಕಲಿದ್ದಾರೆ. ಜಯ್ ಶಾ ಮಾಲಿಕತ್ವದ ಸಂಸ್ಥೆಯೊಂದು ಒಂದೇ ವರ್ಷದಲ್ಲಿ 16 ಸಾವಿರ ಪಟ್ಟು ವ್ಯವಹಾರ ವೃದ್ಧಿಸಿಕೊಂಡಿದೆ ಎಂದು ದ ವೈರ್ ಇಂಗ್ಲೀಷ್ ಜಾಲತಾಣವು ವಿಸ್ತೃತ ವರದಿ ಪ್ರಕಟಿಸಿತ್ತು. ಕಾಂಗ್ರೆಸ್ ಪಕ್ಷವು ಈ ಪ್ರಕರಣವನ್ನು ಕೈಗೆತ್ತಿಕೊಂಡು ಬಿಜೆಪಿ ವಿರುದ್ಧ ವಾಕ್'ಪ್ರಹಾರ ನಡೆಸುತ್ತಿದೆ. ಪ್ರಕರಣದ ತನಿಖೆ ನಡೆಯಬೇಕೆಂದು ಆಗ್ರಹಿಸಿದೆ. ಈ ವಿಚಾರದಲ್ಲಿ ಬಿಜೆಪಿಯ ಅನೇಕ ಮುಖಂಡರು ಜಯ್ ಶಾ ನೆರವಿಗೆ ಧಾವಿಸಿದ್ದಾರೆ. ಜಯ್ ಶಾ ಅವರ ಸಂಸ್ಥೆಯು ಕಾನೂನುಬದ್ಧವಾಗಿ ವ್ಯವಹಾರ ನಡೆಸಿಕೊಂಡು ಬಂದಿದೆ. ಯಾವುದೇ ವ್ಯಾಪಾರದಲ್ಲಿ ದಿಢೀರ್ ವಹಿವಾಟು ವೃದ್ಧಿಯಾಗುವುದರಲ್ಲಿ ಅಸಹಜವೇನಲ್ಲ. ಅವರನ್ನು ಸುಖಾಸುಮ್ಮನೆ ರಾಜಕೀಯ ಕಾರಣಕ್ಕಾಗಿ ವಿವಾದಕ್ಕೆ ಎಳೆದು ತರಲಾಗಿದೆ ಎಂಬುದು ಬಿಜೆಪಿಯ ಆರೋಪವಾಗಿದೆ. ಆದರೆ, ಜಯ್ ಶಾ ವ್ಯವಹಾರ ಶುದ್ಧವಾಗಿದ್ದೇ ಆದಲ್ಲಿ ತನಿಖೆಗೆ ಯಾಕೆ ಹಿಂದೇಟು ಹಾಕಲಾಗುತ್ತಿದೆ ಎಂಬುದು ಕಾಂಗ್ರೆಸ್ ಪಕ್ಷದ ತಿರುಗೇಟಾಗಿದೆ.

ವಾದ್ರಾ ಬಯಲಿಗೆಳೆದವಳಿಂದ ವರದಿ:
ಜಯ್ ಶಾ ಅವರ ಸಂಸ್ಥೆಯಿಂದ ನಡೆದಿರಬಹುದೆನ್ನಲಾದ ಅವ್ಯವಹಾರ ಸಾಧ್ಯತೆ ಬಗ್ಗೆ ವರದಿ ಮಾಡಿದವರು ದಿ ವೈರ್'ನ ರಿಪೋರ್ಟರ್ ರೋಹಿಣಿ ಸಿಂಗ್. 2011ರಲ್ಲಿ ರೋಹಿಣಿ ಸಿಂಗ್ ಎಕನಾಮಿಕ್ ಟೈಮ್ಸ್ ವರದಿಗಾರ್ತಿಯಾಗಿದ್ದಾಗ ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಅವರ ಡಿಎಲ್'ಎಫ್ ಹಗರಣವನ್ನು ಬಯಲಿಗೆ ತಂದಿದ್ದರು.

ಏನಿದು ಪ್ರಕರಣ?
ಜಯ್ ಶಾ ಅವರ ಮಾಲಕತ್ವದ ಟೆಂಪಲ್ ಎಂಟರ್'ಪ್ರೈಸ್ ಸಂಸ್ಥೆ ಆರಂಭಗೊಂಡಿದ್ದು 2004ರಲ್ಲಿ. ಜಯ್ ಶಾ ಮತ್ತು ಜಿತೇಂದ್ರ ಶಾ ಅವರು ಈ ಸಂಸ್ಥೆಯ ನಿರ್ದೇಶಕರು. ಕೃಷಿ ಉತ್ಪನ್ನ ಸೇರಿದಂತೆ ಹೋಲ್'ಸೇಲ್ ಆಮದು ಮತ್ತು ರಫ್ತು ನಡೆಸುವುದು ಸಂಸ್ಥೆಯ ವ್ಯವಹಾರ. 2013-14ರವರೆಗೂ ಟೆಂಪಲ್ ಎಂಟರ್'ಪ್ರೈಸ್ ಸಂಸ್ಥೆಗೆ ಯಾವುದೇ ಸ್ಥಿರಾಸ್ತಿ ಇರಲಿಲ್ಲ. 2013 ಮತ್ತು 2014ರ ಹಣಕಾಸು ವರ್ಷಗಳಲ್ಲಿ ಸಂಸ್ಥೆಯು 6,230 ಮತ್ತು 1,724 ರೂಪಾಯಿ ನಷ್ಟ ಕೂಡ ಅನುಭವಿಸಿತ್ತು. 2014-15ರ ವರ್ಷದಲ್ಲಿ ಅದರ ಆದಾಯವು 50 ಸಾವಿರ ರೂಪಾಯಿ ಇತ್ತು. ಆದರೆ, 2015-16ರ ವರ್ಷದಲ್ಲಿ ಆದಾಯ ಪ್ರಮಾಣ ಏಕ್'ದಂ 80.5 ಕೋಟಿ ರೂಪಾಯಿಗೆ ಏರಿಕೆಯಾಯಿತು. ಹೆಚ್ಚೂಕಡಿಮೆ 16 ಸಾವಿರ ಪಟ್ಟು ದಿಢೀರ್ ಏರಿಕೆಯಾಗಿದ್ದು ಅನುಮಾನಕ್ಕೆ ಕಾರಣವಾಗಿದೆ.

ಕುತೂಹಲದ ವಿಚಾರವೆಂದರೆ, ಟೆಂಪಲ್ ಎಂಟರ್'ಪ್ರೈಸ್ ಸಂಸ್ಥೆಯ ವ್ಯವಹಾರವು 80 ಕೋಟಿಗೆ ಜಂಪ್ ಆದರೂ 2016ರಲ್ಲಿ ಸಂಸ್ಥೆಯನ್ನು ಮುಚ್ಚಲಾಯಿತು. ವ್ಯವಹಾರದಲ್ಲಿ ನಷ್ಟವಾದ್ದರಿಂದ ಸಂಸ್ಥೆಯನ್ನು ಮುಚ್ಚಲಾಯಿತಂತೆ.

ಇವೆಲ್ಲದರ ಬಗ್ಗೆ ರೋಹಿಣಿ ಸಿಂಗ್ ಮಾಡಿದ ತನಿಖಾ ವರದಿಯನ್ನು ದಿ ವೈರ್ ವೆಬ್'ಸೈಟ್ ಪ್ರಕಟಿಸಿದೆ. ಈ ವಿಚಾರವು ಈಗ ಕಾಂಗ್ರೆಸ್ ಪಾಲಿಗೆ ಕೇಂದ್ರದ ವಿರುದ್ಧ ಮತ್ತೊಂದು ಪ್ರಮುಖ ಅಸ್ತ್ರವಾಗಿದೆ.

Follow Us:
Download App:
  • android
  • ios