ಬೆಂಗಳೂರು(ಜೂ.20): ರಂಜಾನ್ ಹಬ್ಬದಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದ ವಿಜಯಪುರದ ಮೌಲ್ವಿ ತನ್ವೀರ್ ಪೀರಾ ಹಾಶಿಮ್ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಖ್ಯಾತ ಉರ್ದು ಕವಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಜಾವೇದ್ ಅಖ್ತರ್ ಆಗ್ರಹಿಸಿದ್ದಾರೆ. ಬಕ್ರೀದ್ ವೇಳೆ ಗೋವುಗಳನ್ನು ಕೊಲ್ಲುತ್ತೇವೆ ಎಂಬ ಮೌಲ್ವಿ ಹೇಳಿಕೆ ಬೇಜವಾಬ್ದಾರಿತನದ್ದು ಮತ್ತು ಅತಿರೇಕದ್ದು ಎಂದು ಅಖ್ತರ್ ಹೇಳಿದ್ದಾರೆ.

ಜಾತ್ಯತೀತತೆ ಎಂದರೆ ಅಲ್ಪಸಂಖ್ಯಾತ ಕೋಮುವಾದವನ್ನು ಕಡೆಗಣಿಸುವುದು ಅಥವಾ ಸಹಿಸಿಕೊಳ್ಳುವುದು ಎಂದರ್ಥವಲ್ಲ ಎಂದಿರುವ ಅವರು, ಈ ಬೇಜವಾಬ್ದಾರಿಯುತ ಮತ್ತು ಅತಿರೇಕದ ಹೇಳಿಕೆ ನೀಡಿದ ಮೌಲ್ವಿ ತನ್ವೀರ್ ಹಾಶಿಮ್ ನನ್ನು ತಕ್ಷಣವೇ ಬಂಧಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಜೂನ್ 16ರಂದು ವಿಜಯಪುರದಲ್ಲಿ ನಡೆದ ರಂಜಾನ್ ಆಚರಣೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೌಲ್ವಿ, ಮುಂದಿನ ತಿಂಗಳುಗಳಲ್ಲಿ ಬಕ್ರೀದ್ ಬರುತ್ತದೆ ಆಗ ನಾವು ಗೋವುಗಳನ್ನು ಕೊಲ್ಲುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.