Asianet Suvarna News Asianet Suvarna News

ಸತೀಶ್ ಜಾರಕಿಹೊಳಿ ನೀಡಿದ ಖಡಕ್ ಎಚ್ಚರಿಕೆ ಏನು.?

ಸದ್ಯ ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಕಲಹ ತಣ್ಣಗಾದಂತೆ ಕಂಡು ಬಂದಿದೆ. ಆದರೆ ಇದೇ ವೇಳೆ ಸತಿಶ್ ಜಾರಕಿಹೊಳಿ ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. 

Jarkiholi Warning About Lok Sabha Election
Author
Bengaluru, First Published Sep 9, 2018, 1:24 PM IST

ಬೆಳಗಾವಿ :  ಬೆಳಗಾವಿ ಕಾಂಗ್ರೆಸ್‌ ರಾಜಕಾರಣದ ಬೆಂಕಿ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಸಂಧಾನದೊಂದಿಗೆ ಮುಕ್ತಾಯವಾಗುವಂತೆ ಕಾಣುತ್ತಿಲ್ಲ, ಮುಂಬರುವ ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ವೇಳೆ ಮತ್ತೆ ಹೊತ್ತಿ ಉರಿಯುವ ಸಾಧ್ಯತೆ ಇದೆ. ಸ್ವತಃ ಶಾಸಕ ಸತೀಶ್‌ ಜಾರಕಿಹೊಳಿ ಅವರೇ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆ ವೇಳೆ ಮತ್ತೆ ಪಕ್ಷದಲ್ಲಿ ಗದ್ದಲ ಏಳುವ ಸಾಧ್ಯತೆ ಇದೆ ಎಂದು ಅವರು ಕಾರ್ಯಕರ್ತರ ಎದುರೇ ಹೇಳಿಕೊಂಡಿದ್ದಾರೆ.

ನಗರದಲ್ಲಿ ಶನಿವಾರ ಈ ವಿಚಾರಗಳೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವಿವಾದಗಳು ಮತ್ತೆ ಲೋಕಸಭೆ ಚುನಾವಣೆ ವೇಳೆಯೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅದನ್ನು ಬಗೆಹರಿಸಲು ಪಕ್ಷದ ನಾಯಕರಿದ್ದಾರೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರೆ ನಾವು ಸುಮ್ಮನಿರುವುದಿಲ್ಲ. ಸದ್ಯಕ್ಕೆ ಅಂತಹ ಪರಿಸ್ಥಿತಿ ಬಂದಿಲ್ಲ ಎಂದು ಹೇಳಿದರು.

ಇದಕ್ಕೂ ಮುನ್ನ ಯಮಕನಮರಡಿ ಬೂತ್‌ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ವೀರಕುಮಾರ್‌ ಪಾಟೀಲ, ಕಾಕಾಸಾಹೇಬ ಪಾಟೀಲ ಸೇರಿದಂತೆ ಈ ಭಾಗದ ಪ್ರಮುಖ ನಾಯಕರು ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ತಾವು ಅಂತಿಮಗೊಳಿಸುವ ಅಭ್ಯರ್ಥಿಯ ಪರವಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಸೂಚನೆಯನ್ನು ಅವರು ನೀಡಿದ್ದಾರೆ.

ಬೆಳಗಾವಿ ಲೋಕಸಭೆ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪಕ್ಷದ ವರಿಷ್ಠರ ಎದುರೇ ತಿಕ್ಕಾಟ ನಡೆದಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios