Asianet Suvarna News Asianet Suvarna News

ಲಕ್ಷ್ಮೀ ಹೆಬ್ಬಾಳ್ಕರ್ ಪದಚ್ಯುತಿಗೆ ನಡೆದಿದೆ ಲಾಬಿ?

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿರುದ್ಧ ಜಾರಕಿ ಹೊಳಿ ಸಹೋದರರು ಲಾಬಿ ನಡೆಸಲಾರಂಭಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಪದಚ್ಯುತಗೊಳಿಸಲು ಯತ್ನಿಸುತ್ತಿದ್ದು ಇದು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ. 

Jarkiholi Brothers Lobby Against Lakshmi Hebbalkar
Author
Bengaluru, First Published Aug 30, 2018, 10:35 AM IST

ಬೆಂಗಳೂರು :  ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ತಿರುಗಿಬಿದ್ದಿರುವ ಬೆಳಗಾವಿಯ ಜಾರಕಿಹೊಳಿ ಸಹೋದರರು ಅವರನ್ನು ಪದಚ್ಯುತಗೊಳಿಸಲು ತೀವ್ರ ಪ್ರಯತ್ನ ಆರಂಭಿಸಿದ್ದರೆ, ಲೋಕಸಭಾ ಚುನಾವಣೆವರೆಗೂ ಹುದ್ದೆ ಉಳಿಸಿಕೊಳ್ಳಲು ಹೆಬ್ಬಾಳ್ಕರ್‌ ಲಾಬಿ ನಡೆಸುವ ಮೂಲಕ ಬೆಳಗಾವಿಯ ಕಾಂಗ್ರೆಸ್‌ ನಾಯಕರ ಮೇಲಾಟ ರಾಜ್ಯಮಟ್ಟದಲ್ಲೂ ಕುತೂಹಲ ಹುಟ್ಟುಹಾಕಿದೆ.

ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಮಹಿಳಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಸತೀಶ್‌ ಜಾರಕಿಹೊಳಿ ಅವರು ಹೈಕಮಾಂಡ್‌ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದರೆ, ಈ ಕಾರ್ಯದಲ್ಲಿ ತಮಗೆ ನೆರವಾಗಬೇಕು ಎಂದು ರಮೇಶ್‌ ಜಾರಕಿಹೊಳಿ ಅವರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ನಿರ್ಮಾಣ ಮಾಡತೊಡಗಿದ್ದಾರೆ. ಇದಕ್ಕಾಗಿಯೇ ಮೈಸೂರಿನವರೆಗೂ ಬಂದು ಸಿದ್ದರಾಮಯ್ಯ ಅವರೊಂದಿಗೆ ಒಂದು ದಿನಪೂರ್ತಿ ಇದ್ದ ರಮೇಶ್‌ ಅವರು ಬೇರೆ ಯಾರನ್ನಾದರೂ ಆ ಸ್ಥಾನಕ್ಕೆ ತನ್ನಿ, ಲಕ್ಷ್ಮೇ ಹೆಬ್ಬಾಳ್ಕರ್‌ರನ್ನು ಮಾತ್ರ ಮಹಿಳಾ ಅಧ್ಯಕ್ಷಗಿರಿಯಿಂದ ಇಳಿಸಿ ಎಂದು ಒತ್ತಡ ನಿರ್ಮಾಣ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

ಬೆಳಗಾವಿ ಕಾಂಗ್ರೆಸ್‌ನಲ್ಲಿ ಜಾರಕಿಹೊಳಿ ಸಹೋದರರಾದ ಸತೀಶ್‌ ಜಾರಕಿಹೊಳಿ ಹಾಗೂ ರಮೇಶ್‌ ಜಾರಕಿಹೊಳಿ ಪ್ರಭಾವ ಹೆಚ್ಚು. ಆದರೆ, ತಮ್ಮ ಸ್ಥಾನಕ್ಕಾಗಿ ಈ ಸಹೋದರರ ನಡುವೆ ವೈಮನಸ್ಯವಿತ್ತು. ಈ ಸಂದರ್ಭದಲ್ಲಿ ರಮೇಶ್‌ ಜಾರಕಿಹೊಳಿ ಅವರ ತಂಡದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ ಇದ್ದರು. ಆದರೆ, ಬದಲಾದ ಸನ್ನಿವೇಶದಲ್ಲಿ ರಮೇಶ್‌ ಹಾಗೂ ಸತೀಶ್‌ ಒಂದಾಗಿದ್ದು, ಲಕ್ಷ್ಮೀ ಅವರು ರಮೇಶ್‌ ಕ್ಯಾಂಪ್‌ನಿಂದ ಹೊರಬಿದ್ದಿದ್ದಾರೆ. ಅಷ್ಟೇ ಅಲ್ಲ, ಈ ಕ್ಯಾಂಪ್‌ನ ವಿರೋಧಿ ಸಹ ಆಗಿದ್ದಾರೆ.

ಈ ಹಿನ್ನೆಲೆಯಲ್ಲಿ ರಮೇಶ್‌ ಹಾಗೂ ಸತೀಶ್‌ ಸಹೋದರರು ಅವರನ್ನು ಪದಚ್ಯುತಗೊಳಿಸಲು ಯತ್ನಿಸುತ್ತಿದ್ದರೆ, ಲಕ್ಷ್ಮೀ ಅವರು ಲೋಕಸಭಾ ಚುನಾವಣೆವರೆಗೂ ತಮ್ಮ ಸ್ಥಾನ ಉಳಿಸಿಕೊಳ್ಳಲು ಎಲ್ಲಾ ಶಕ್ತಿ ಬಳಸತೊಡಗಿದ್ದಾರೆ ಎಂದು ಮೂಲಗಳು ಹೇಳಿವೆ.

ಹೈಕಮಾಂಡ್‌ನಲ್ಲಿ ಪ್ರಭಾವಿಯಾಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರ ದೆಹಲಿ ಸಂಪರ್ಕಗಳನ್ನು ಬಳಸಿಕೊಳ್ಳುತ್ತಿರುವ ಲಕ್ಷ್ಮೀ, ತಮ್ಮ ಸ್ಥಾನ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಜತೆಗೆ, ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷರಾದ ಸುಷ್ಮೀತಾ ದೇವ್‌ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಲಕ್ಷ್ಮೀ ಯಾವ ಕಾರಣಕ್ಕೂ ತಮ್ಮನ್ನು ಬದಲಿಸದಂತೆ ಒತ್ತಡ ನಿರ್ಮಾಣ ಮಾಡತೊಡಗಿದ್ದಾರೆ ಎನ್ನಲಾಗಿದೆ.

ಲೋಕಸಭಾ ಚುನಾವಣೆವರೆಗೂ ಈ ಹುದ್ದೆ ಉಳಿಸಿಕೊಂಡು ಅನಂತರ ಡಿ.ಕೆ.ಶಿವಕುಮಾರ್‌ ಅವರ ಬೆಂಬಲಿಗರಾದ ಶಾರದಾ ಗೌಡ ಅವರಿಗೆ ಈ ಹುದ್ದೆ ದೊರಕುವಂತೆ ಮಾಡುವುದು ಲಕ್ಷ್ಮೀ ಹಾಗೂ ಶಿವಕುಮಾರ್‌ ಅವರ ಯೋಜನೆ ಎನ್ನಲಾಗಿದೆ. ಇದೆ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಡಾ. ನಾಗಲಕ್ಷ್ಮೇ ಚವಡೆ ಅವರನ್ನು ಮತ್ತು ವೀರಪ್ಪ ಮೊಯ್ಲಿ ಅವರು ಕಮಲಾಕ್ಷಿ ರಾಜಣ್ಣ ಅವರನ್ನು ಈ ಹುದ್ದೆಗೆ ತರಲು ಯತ್ನಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

Follow Us:
Download App:
  • android
  • ios