ನವದೆಹಲಿ: ಮೆಹಬೂಬಾ ಮುಫ್ತಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ವಾಪಸ್‌ ಪಡೆದಿದ್ದ ಬಿಜೆಪಿ, ಇದೀಗ ಕಣಿವೆ ರಾಜ್ಯದಲ್ಲಿ ಸರ್ಕಾರ ರಚಿಸಲು ಭಾರಿ ರಾಜಕೀಯ ತಂತ್ರಗಾರಿಕೆ ನಡೆಸುತ್ತಿದೆ. ಮುಫ್ತಿ ವಿರುದ್ಧ ಬಂಡೆದ್ದಿರುವ ಪಿಡಿಪಿ ಶಾಸಕರನ್ನು ಸೆಳೆದು, ಕಾಶ್ಮೀರದ ಇತಿಹಾಸದಲ್ಲೇ ಮೊದಲ ಬಾರಿಗೆ ಹಿಂದುವೊಬ್ಬರನ್ನು ಮುಖ್ಯಮಂತ್ರಿ ಮಾಡಲು ಯತ್ನಿಸುತ್ತಿದೆ.

ಜಮ್ಮು-ಕಾಶ್ಮೀರದಲ್ಲಿ ಸದ್ಯ ಅಮರನಾಥ ಯಾತ್ರೆ ನಡೆಯುತ್ತಿದೆ. ಆಗಸ್ಟ್‌ ಅಂತ್ಯಕ್ಕೆ ಅದು ಮುಕ್ತಾಯವಾಗಲಿದ್ದು, ಆ ಬಳಿಕವಷ್ಟೇ ರಾಜಕೀಯ ಚಟುವಟಿಕೆಗಳು ಗರಿಗೆದರಲಿವೆ. 

ಈ ಕಸರತ್ತಿನ ಭಾಗವಾಗಿ ಜಮ್ಮು-ಕಾಶ್ಮೀರದ ಮಾಜಿ ಉಪಮುಖ್ಯಮಂತ್ರಿ ನಿರ್ಮಲ್‌ ಸಿಂಗ್‌ ಅವರು ಬುಧವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ವಿಸ್ತೃತವಾಗಿ ಮಾತುಕತೆ ನಡೆಸಿದ್ದಾರೆ.

87 ಸದಸ್ಯ ಬಲದ ಕಾಶ್ಮೀರ ವಿಧಾನಸಭೆಯಲ್ಲಿ ಬಹುಮತಕ್ಕೆ 44 ಸ್ಥಾನಗಳು ಬೇಕು. ಬಿಜೆಪಿ ಬಳಿ 25 ಸದಸ್ಯರಿದ್ದಾರೆ. ಬಹುಮತಕ್ಕೆ ಇನ್ನೂ 19 ಸದಸ್ಯರು ಬೇಕಾಗಿದ್ದಾರೆ. ಈ ಪೈಕಿ ಸಜ್ಜದ್‌ ಲೋನ್‌ ಪಕ್ಷದ ಇಬ್ಬರು ಸದಸ್ಯರ ಬೆಂಬಲ ಬಿಜೆಪಿಗೆ ನಿಕ್ಕಿಯಾಗಿದೆ. ಉಳಿದ 17 ಸದಸ್ಯರನ್ನು ಪಿಡಿಪಿಯಿಂದ ಸೆಳೆಯಲು ಪ್ರಯತ್ನ ನಡೆಸುತ್ತಿದೆ ಎನ್ನಲಾಗಿದೆ.