ಈ ಬಾರಿಯ ಜಂಬೂಸವಾರಿ ಮೆರವಣಿಗೆಯನ್ನು ಉಗ್ರಗಾಮಿಗಳು ಟಾರ್ಗೆಟ್ ಮಾಡಿದ್ದರು ಅನ್ನೋದು ದೊಡ್ಡ ಆತಂಕ ತಂದೊಡ್ಡಿದ್ದ ಸಂಗತಿ. ಸ್ವತ: ಕೇಂದ್ರ ಗುಪ್ತಚರ ದಳ (ಐಬಿ) ಮೈಸೂರು ಪೊಲೀಸರಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿತ್ತು.
ಮೈಸೂರು (ಅ.12): ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಕೊನೆಯ ದಿನವಾದ ನಿನ್ನೆ ಜಂಬೂಸವಾರಿ ಮೆರವಣಿಗೆ ಅತ್ಯಂತ ಯಶಸ್ವಿಯಿಂದ ಜರುಗಿದೆ. ಲಕ್ಷಾಂತರ ಮಂದಿ ಈ ಮೆರವಣಿಗೆ ವೀಕ್ಷಿಸಿ ಆನಂದಿಸಿದ್ದಾರೆ.
ಆದರೆ ನಾಡಹಬ್ಬದ ಕೊನೆಯ ದಿನ ನಡೆಯುವ ಈ ಜಂಬೂಸವಾರಿ ಮೆರವಣಿಗೆಗೆ ಬಂದೊದಗಿದ್ದ ಬಹುದೊಡ್ಡ ಗಂಡಾಂತರವೂ ಇದರೊಂದಿಗೆ ಮಾಯವಾಗಿದೆ. ಈ ವಿಚಾರ ಎಲ್ಲರಿಗಿಂತ ಹೆಚ್ಚಾಗಿ ಮೈಸೂರಿನ ಪೊಲೀಸ್ ಅಧಿಕಾರಿಗಳಿಗೆ ನೆಮ್ಮದಿ ತಂದ ಸಂಗತಿ. ಯಾಕೆಂದರೆ ಈ ತನಕ ಸಣ್ಣ ಸುಳಿವು ಬಿಟ್ಟುಕೊಡದಂತೆ ಪೊಲೀಸರು ಗೌ ಕಾಪಾಡಿಕೊಂಡು ಬಂದಿದ್ದ ಮಾಹಿತಿಯೊಂದು ಬಯಲಾಗಿದೆ.
ಈ ಬಾರಿಯ ಜಂಬೂಸವಾರಿ ಮೆರವಣಿಗೆಯನ್ನು ಉಗ್ರಗಾಮಿಗಳು ಟಾರ್ಗೆಟ್ ಮಾಡಿದ್ದರು ಅನ್ನೋದು ದೊಡ್ಡ ಆತಂಕ ತಂದೊಡ್ಡಿದ್ದ ಸಂಗತಿ. ಸ್ವತ: ಕೇಂದ್ರ ಗುಪ್ತಚರ ದಳ (ಐಬಿ) ಮೈಸೂರು ಪೊಲೀಸರಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿತ್ತು.
ದಸರಾಕ್ಕೆ ಕೆಲವು ದಿನ ಬಾಕಿ ಇರುವಂತೆ ಮೈಸೂರಿಗೆ ಬಂದಿದ್ದ ಐಬಿ ತಂಡ ಮೈಸೂರು ಪೊಲೀಸ್ ಅಧಿಕಾರಿಗಳಿಗೆ ಸಾಕಷ್ಟು ಸಲಹೆ ಸೂಚನೆ ನೀಡಿತ್ತು. ಅದೇ ಕಾರಣಕ್ಕಾಗಿಯೇ ಅರಮನೆಯ ಆವರಣದಲ್ಲಿ ಹೆಜ್ಜೆ-ಹೆಜ್ಜೆಗೂ ಪೊಲೀಸರ ಸರ್ಪಗಾವಲು ಹಾಕಿ ಕಣ್ಗಾವಲು ವಹಿಸಲಾಗಿತ್ತು.
ಅದರಲ್ಲೂ ಚಿನ್ನದ ಅಂಬಾರಿ ಹೊತ್ತ ಅರ್ಜುನ ಆನೆಗೆ ಮೂರು ಹಂತದ ಭಾರೀ ಭದ್ರತೆ ಕೊಟ್ಟು ಕಾಪಾಡಲಾಗಿತ್ತು. ಕೇಂದ್ರ ಗುಪ್ತಚರ ಸಂಸ್ಥೆ ಅತ್ಯಂತ ನಿಖರವಾಗಿಯೇ ನೀಡಿದ್ದ ಮಾಹಿತಿ ಆಧರಿಸಿ, ಮೈಸೂರು ಪೊಲೀಸರು ಸಾಕಷ್ಟು ಮುನ್ನಚ್ಚರಿಕೆ ವಹಿಸಿದ ಪರಿಣಾಮ ಉಗ್ರರ ಟಾರ್ಗೆಟ್‌ನಿಂದ ಜಂಬೂಸವಾರಿ ಮೆರವಣಿಗೆ ಪಾರಾಗಿದೆ.
