"ಈ ದೇಶದಲ್ಲಿ ಒಂದೇ ಸಂಸ್ಕೃತಿಯನ್ನು ಹೇರಲು ಸಾಧ್ಯವಿಲ್ಲ. ನಾವು ಎಲ್ಲವನ್ನೂ ಆಚರಿಸುತ್ತೇವೆ. ಯೂನಿಫಾರ್ಮ್ ಸಿವಿಲಿ ಕೋಡ್'ನ್ನು ಅಳವಡಿಸಲಾಗುವುದಿಲ್ಲ"
ಹೈದರಾಬಾದ್(ಜ. 20): ಜಲ್ಲಿಕಟ್ಟು ಪರವಾಗಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಜನಾಂದೋಲನವನ್ನಿಟ್ಟುಕೊಂಡು ಮುಸ್ಲಿಂ ಮುಖಂಡ ಅಸಾದುದ್ದೀನ್ ಒವೈಸಿಯವರು ಬಲಪಂಥೀಯ ಸಂಘಟನೆಗಳ ಮೇಲೆ ಹರಿಹಾಯ್ದಿದ್ದಾರೆ. ಜಲ್ಲಿಕಟ್ಟು ನಿಷೇಧದ ಪ್ರಕರಣವನ್ನು ಸಮಾನ ನಾಗರಿಕ ಸಂಹಿತೆಯ ವಿವಾದಕ್ಕೆ ತಳುಕು ಹಾಕಿರುವ ಒವೈಸಿ, ಇದು ಹಿಂದುತ್ವವಾದಿ ಶಕ್ತಿಗಳಿಗೆ ಒಂದು ಎಚ್ಚರಿಕೆಯ ಪಾಠವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಈ ದೇಶದಲ್ಲಿ ಒಂದೇ ಸಂಸ್ಕೃತಿಯನ್ನು ಹೇರಲು ಸಾಧ್ಯವಿಲ್ಲ. ನಾವು ಎಲ್ಲವನ್ನೂ ಆಚರಿಸುತ್ತೇವೆ. ಯೂನಿಫಾರ್ಮ್ ಸಿವಿಲಿ ಕೋಡ್'ನ್ನು ಅಳವಡಿಸಲಾಗುವುದಿಲ್ಲ" ಎಂದು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಒವೈಸಿ ತಿಳಿಸಿದ್ದಾರೆ.
ತಮಿಳುನಾಡಿನ ಜಲ್ಲಿಕಟ್ಟು, ಮಹಾರಾಷ್ಟ್ರ ಮತ್ತು ಪಂಜಾಬ್'ನಲ್ಲಿನ ಬಂಡಿ ಸ್ಪರ್ಧೆ, ಕರ್ನಾಟಕದ ಕಂಬಳ, ಗೋವಾದ ಧಿರಿಯೋ ಕಾಳಗವನ್ನು ನಿಷೇಧಿಸಿ ಸುಪ್ರೀಮ್ ಕೋರ್ಟ್ 2014ರಂದು ಆದೇಶ ಹೊರಡಿಸಿತ್ತು. ಇದೀಗ, ತಮಿಳುನಾಡಿನ ಜಲ್ಲಿಕಟ್ಟು ನಿಷೇಧ ತೆರವು ಮಾಡಬೇಕೆಂದು ಒತ್ತಾಯಿಸಿ ಬೃಹತ್ ಜನಾಂದೋಲನವೇ ನಡೆದಿದೆ. ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸಿ ಕೇಂದ್ರ ಸರಕಾರವು ಸುಗ್ರೀವಾಜ್ಞೆ ಮೂಲಕ ಜಲ್ಲಿಕಟ್ಟುಗೆ ಮರುಜೀವ ನೀಡಲು ಮುಂದಾಗಿದೆ.
