ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿಯೇ ಜಾಲಹಳ್ಳಿಯ ರೈಲ್ವೆ ಕ್ರಾಸಿಂಗ್ ಬಳಿ ನೂತನವಾಗಿ ನಿರ್ಮಿಸಿರುವ ರೈಲ್ವೆ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದರು. ಇದರೊಂದಿಗೆ ಈ ಭಾಗದ ಜನರ ಬಹುಕಾಲದ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಮೂಡಿಸಿದೆ.
ಬೆಂಗಳೂರು (ಜ.06): ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿಯೇ ಜಾಲಹಳ್ಳಿಯ ರೈಲ್ವೆ ಕ್ರಾಸಿಂಗ್ ಬಳಿ ನೂತನವಾಗಿ ನಿರ್ಮಿಸಿರುವ ರೈಲ್ವೆ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದರು. ಇದರೊಂದಿಗೆ ಈ ಭಾಗದ ಜನರ ಬಹುಕಾಲದ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಮೂಡಿಸಿದೆ.
ಹಲವು ಗೊಂದಲಗಳಿಂದ ವಿಳಂಬವಾಗಿದ್ದ ಕಾಮಗಾರಿ ಕೊನೆಗೂ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ. ಮೇಲ್ಸೇತುವೆ ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘‘ನಗರ ಪ್ರದಕ್ಷಿಣೆ ವೇಳೆ ಸಾರ್ವಜನಿಕರು ತೊಂದರೆಗಳನ್ನು ಹೇಳಿಕೊಂಡ ಹಿನ್ನೆಲೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸುವಂತೆ ಸೂಚಿಸಲಾಗಿತ್ತು. ಯೋಜನೆ ಈಗ ಪೂರ್ಣಗೊಂಡಿದೆ. ಇದರಿಂದಾಗಿ ಹೆಬ್ಬಾಳ, ಯಲಹಂಕ ಭಾಗಗಳಿಂದ ತುಮಕೂರು ರಸ್ತೆ ನಡುವೆ ಸಂಚರಿಸುವವರಿಗೆ ಹೆಚ್ಚಿನ ಅನುಕೂಲವಾಗಲಿದೆ,’’ ಎಂದರು.
‘‘ಮೇಲ್ಸೇತುವೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಸರ್ಕಾರದಿಂದ ಅನುದಾನ ನೀಡಲಾಗಿದ್ದು, ಬಿಡಿಎ ಹಾಗೂ ರೈಲ್ವೆ ಇಲಾಖೆ ಸಹಯೋಗದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಇದರಿಂದ ಯಶವಂತಪುರ, ಕೆಂಗೇರಿ, ರಾಜಾಜಿನಗರ ಹಾಗೂ ಯಲಹಂಕ-ಹೆಬ್ಬಾಳ ಭಾಗದ ಜನ ಸಂಚಾರ ದಟ್ಟಣೆಯಿಲ್ಲದೆ ಸುಗಮವಾಗಿ ಸಂಚರಿಸಬಹುದು ಎಂಬ ನಿರೀಕ್ಷೆ ಇದೆ,’’ ಎಂದು ಹೇಳಿದರು.
ಈ ವೇಳೆ ಸಚಿವರಾದ ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್, ಸಂಸದ ಡಿ.ಕೆ.ಸುರೇಶ್, ಶಾಸಕ ಮುನಿರತ್ನ, ಬಿಬಿಎಂಪಿ ಸದಸ್ಯರಾದ ಮೋಹನ್ ಕುಮಾರ್, ಜಿ.ಕೆ.ವೆಂಕಟೇಶ್, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಸೇರಿದಂತೆ ಪ್ರಮುಖರು ಹಾಜರಿದ್ದರು.
ಮೇಲ್ಸೇತುವೆ ಅಂಕಿ ಸಂಖ್ಯೆ
- ರೈಲ್ವೆ ಮೇಲ್ಸೇತುವೆಯ ಒಟ್ಟು ಉದ್ದ - 668.78 ಮೀಟರ್
- ಕಾಮಗಾರಿಯ ಒಟ್ಟು ಮೊತ್ತ - ₹40 ಕೋಟಿ
- ಸಿವಿಲ್ ಕಾಮಗಾರಿಗಳ ಮೊತ್ತ - ₹28.35 ಕೋಟಿ
- ಭೂಸ್ವಾಧೀನಕ್ಕಾಗಿ ನೀಡಲಾದ ಮೊತ್ತ - 11.65 ಕೋಟಿ
- ಬಿಡಿಎ ಪಾಲುದಾರಿಕೆ - 26.77 ಕೋಟಿ
- ರೈಲ್ವೆ ಇಲಾಖೆಯ ಪಾಲುದಾರಿಕೆ - ₹13.23 ಕೋಟಿ
