ಜೇಟ್ಲಿ-ಮಲ್ಯ ನಡುವೆ ಸಂಸತ್ ನಲ್ಲಿ ಮಾತುಕತೆ! ಸಿಸಿಟಿವಿ ಫೂಟೇಜ್ ಇದೆ ಎಂದ ರಾಹುಲ್ ಗಾಂಧಿ! ಜೇಟ್ಲಿ ಜೊತೆ ಮಾತನಾಡಿದ್ದಾಗಿ ಹೇಳಿದ್ದ ಮಲ್ಯ! ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಮಲ್ಯ! ಜೇಟ್ಲಿ-ಮಲ್ಯ ಮಾತುಕತೆ ಬಹಿರಂಗಕ್ಕೆ ಕಾಂಗ್ರೆಸ್ ಆಗ್ರಹ
ನವದೆಹಲಿ(ಸೆ.13): ದೇಶ ಬಿಟ್ಟು ಓಡಿಹೋದ ಕ್ರಿಮಿನಲ್ ಗಳ ಜೊತೆಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಕೈಜೋಡಿಸಿದ್ದಾರೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ವಿದೇಶಕ್ಕೆ ತೆರಳುವ ಮುನ್ನ ನಾನು ವಿತ್ತ ಸಚಿವರನ್ನು ಬೇಟಿ ಮಾಡಿದ್ದೆ. ನಾನು ಮಾಡಿದ್ದ ರೂ.9 ಸಾವಿರ ಕೋಟಿ ಬ್ಯಾಂಕ್ ಸಾಲ ಮರುಪಾವತಿಸುವ ಬಗ್ಗೆ ಪ್ರಸ್ತಾಪ ಇರಿಸಿದ್ದೆ ಎಂದು ಮಲ್ಯ ಹೇಳಿಕೆ ನೀಡಿದ್ದರು. ಮಲ್ಯ ಅವರ ಈ ಹೇಳಿಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.
ಈ ಕುರಿತು ರಾಜಧಾನಿ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, ಸಂಸತ್ತಿನಲ್ಲಿ ನಡೆದ ಜೇಟ್ಲಿ-ಮಲ್ಯ ನಡುವಿನ ಮಾತುಕತೆಯ ಸಿಸಿಟಿವಿ ಫೂಟೇಜ್ ಇದೆ ಎಂದು ಹೇಳಿದ್ದಾರೆ.
ನಿನ್ನಯಷ್ಟೇ ವಿಜಯ್ ಮಲ್ಯ ಅವರು ಸಂಸತ್ತಿನಿಂದ ಹೊರ ಬರುವುದಕ್ಕೂ ಮುನ್ನು ಅರುಣ್ ಜೇಟ್ಲಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೆ ಎಂದು ಹೇಳಿದ್ದರು. ಎಲ್ಲಾ ಭೇಟಿಗಳ ಕುರಿತಂತೆ ಅರುಣ್ ಜೇಟ್ಲಿಯವರು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಾರೆ. ಆದರೆ, ಈ ಭೇಟಿ ಕುರಿತಂತೆ ಮಾತ್ರ ಎಲ್ಲಿಯೂ ಬರೆದಿಲ್ಲವೇಕೆ ಎಂಬುದು ನನಗೆ ತಿಳಿಯುತ್ತಿಲ್ಲ. ಮಲ್ಯ ಜೊತೆಗೆ ಸ್ವಲ್ಪವೇ ಮಾತನಾಡಿದ್ದೆ ಎಂದು ಜೇಟ್ಲಿ ಸುಳ್ಳು ಹೇಳುತ್ತಿದ್ದಾರೆಂದು ರಾಹುಲ್ ಹರಿಹಾಯ್ದರು.
ದೇಶಬಿಟ್ಟು ಓಡಿಹೋಗಿರುವ ವ್ಯಕ್ತಿಯೊಂದಿಗೆ ವಿತ್ತ ಸಚಿವರು ಮಾತನಾಡಿದ್ದಾರೆ. ಪಲಾಯನಗೊಳ್ಳುತ್ತಿದ್ದ ವ್ಯಕ್ತಿ ವಿತ್ತ ಸಚಿವರ ಬಳಿಯೇ ತಾನು ದೇಶ ಬಿಟ್ಟು ಓಡಿಹೋಗುತ್ತಿರುವ ವಿಚಾರವನ್ನು ಹೇಳಿದ್ದಾನೆ. ಮಲ್ಯ ದೇಶ ಬಿಡುತ್ತಿರುವ ವಿಚಾರ ತಿಳಿದಿದ್ದರೂ ಜೇಟ್ಲಿ, ಸಿಬಿಐಗಾಗಲೀ, ಜಾರಿ ನಿರ್ದೇಶನಕ್ಕಾಗಲೀ ಅಥವಾ ಪೊಲೀಸರಿಗಾಗಲಿ ಮಾಹಿತಿ ನೀಡಿಲ್ಲವೇಕೆ? ಬಂಧನದ ನೋಟಿಸ್ ಮಾಹಿಯ ನೋಟಿಸ್ ಆಗಿ ಬದಲಾಗಿದೆ. ಸಿಬಿಐನ್ನು ನಿಯಂತ್ರಿಸುವವರು ಮಾತ್ರ ಈ ಕೆಲಸವನ್ನು ಮಾಡಬಲ್ಲರು ಎಂದು ರಾಹುಲ್ ಗಂಭೀರ ಆರೋಪ ಮಾಡಿದರು.
