ವಿಧಾನಸಭೆ :  ಸಾಲಮನ್ನಾ ಹೆಸರಲ್ಲಿ ರೈತರಿಗೆ ಸ್ವರ್ಗ ತೋರಿಸಿದ್ದ ರಾಜ್ಯ ಸರ್ಕಾರವು ಈಗ ನೂರೆಂಟು ಷರತ್ತು ಹಾಕಿ ರೈತರಿಗೆ ಮೋಸ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಬಿಜೆಪಿಯ ಹಿರಿಯ ಸದಸ್ಯ ಜಗದೀಶ್‌ ಶೆಟ್ಟರ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ಬಜೆಟ್‌ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿ, ತೆರಿಗೆದಾರರಿಗೆ ಸಾಲ ಮನ್ನಾ ಇಲ್ಲ. ರೈತ ಕುಟುಂಬದ ಒಬ್ಬ ಸದಸ್ಯ ತೆರಿಗೆ ಪಾವತಿದಾರನಿದ್ದರೆ ಆತನ ಕುಟುಂಬದ ಸಾಲ ಮನ್ನಾ ಮಾಡುವುದಿಲ್ಲ ಎಂಬ ಸರ್ಕಾರದ ನಿಲುವು ಸರಿಯಲ್ಲ. ಪ್ರಣಾಳಿಕೆ ಮತ್ತು ಚುನಾವಣಾ ಪ್ರಚಾರದ ವೇಳೆ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿ ರೈತರಿಗೆ ಸ್ವರ್ಗ ತೋರಿಸಲಾಯಿತು. ಈಗ ನೂರೆಂಟು ಷರತ್ತು ಹಾಕಿ ರೈತರಿಗೆ ಮೋಸ ಮಾಡಲಾಗಿದೆ ಎಂದು ಕಿಡಿಕಾರಿದರು.

ಬಜೆಟ್‌ನಲ್ಲಿ ಸುಸ್ತಿ ಬೆಳೆ ಸಾಲ ಮಾತ್ರ ಮನ್ನಾ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಸುಸ್ತಿ ಸಾಲ ಮಾಡಿದವರೆಷ್ಟುಎಂಬುದನ್ನು ಸರ್ಕಾರ ಬಹಿರಂಗ ಪಡಿಸಬೇಕು. ಶ್ರೀಮಂತ ರೈತರಿಗೆ ಸಾಲ ಮನ್ನಾ ಮಾಡಬಾರದು ಎಂದು ರೈತರ ಸಲಹೆಯಂತೆ ತೀರ್ಮಾನ ಮಾಡಲಾಗಿದೆ ಎಂಬ ಸರ್ಕಾರದ ಹೇಳಿಕೆ ಸರಿಯಲ್ಲ. ಷರತ್ತುಗಳನ್ನು ಸಡಿಲಿಸಿ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್‌ ಪ್ರಣಾಳಿಕೆ ಪ್ರಕಾರ 53 ಸಾವಿರ ಕೋಟಿ ರು. ರೈತರ ಸಾಲಮನ್ನಾ ಮಾಡಲಾಗುವುದು ಎಂದು ಹೇಳಲಾಗಿದೆ. ಈಗ ಕೇವಲ 34 ಸಾವಿರ ಕೋಟಿ ರು. ಸಾಲಮನ್ನಾ ಮಾಡಲಾಗಿದೆ. ಅವರ ವಾಗ್ದಾನದಂತೆ ಸಾಲಮನ್ನಾ ಮಾಡಲು ಕಾಂಗ್ರೆಸ್‌ ಅಡ್ಡಿಪಡಿಸಿದೆಯೇ ಎಂಬುದನ್ನು ಹೇಳಬೇಕು. ಸಮ್ಮಿಶ್ರ ಸರ್ಕಾರ ಮಾಡಿರುವ ಸಾಲಮನ್ನಾದಿಂದ ರಾಜ್ಯದ ರೈತರಿಗೆ ಯಾವುದೇ ಲಾಭವಾಗುವುದಿಲ್ಲ. ರಾಜ್ಯದ ಕೆಲವು ಭಾಗದಲ್ಲಿ ಕೇವಲ ಶೇ.7ರಷ್ಟುಸುಸ್ತಿ ಸಾಲ ಇದ್ದು, ಅಷ್ಟು  ಮಂದಿಗೆ ಮಾತ್ರ ಇದರ ಲಾಭವಾಗಲಿದೆ. ರಾಜ್ಯದ ದೊಡ್ಡ ಜಿಲ್ಲೆಗಳಲ್ಲಿ ಒಂದಾದ ಬೆಳಗಾವಿಯಲ್ಲಿ 7.7 ಕೋಟಿ ರು. ನಷ್ಟುಮಾತ್ರ ರೈತರಿಗೆ ಲಾಭವಾಗಲಿವೆ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೆಳಗಾವಿ ಜಿಲ್ಲೆಯ ರೈತರಿಗೆ 7 ಸಾವಿರ ಕೋಟಿ ರು. ಮೊತ್ತದಷ್ಟುಲಾಭವಾಗಲಿದೆ ಎಂದು ಹೇಳಿದ್ದರು. ಇದು ಸತ್ಯಕ್ಕೆ ದೂರವಾದದು ಎಂದು ಹೇಳಿದರು.

ಕಳೆದ ಮೂರು ವರ್ಷದ ಅವಧಿಯಲ್ಲಿ ಎಲ್ಲ ಬ್ಯಾಂಕ್‌ಗಳಲ್ಲಿ 2,25,47,526 ಖಾತೆದಾರರು ಇದ್ದು, ಈ ಪೈಕಿ 1.35 ಲಕ್ಷ ಕೋಟಿ ರು. ಬೆಳೆ ಸಾಲ ಇದೆ. ಈಗ ಸುಸ್ತಿ ಸಾಲ ಮನ್ನಾ ಮಾಡಲಾಗಿದೆ. ಇದರ ಲಾಭ ಯಾವ ರೈತರಿಗೂ ಆಗುವುದಿಲ್ಲ. ಅಧಿವೇಶನ ಬಳಿಕ 34 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿರುವುದನ್ನೇ ಡಂಗೂರ ಸಾರಲಿದ್ದಾರೆ. ಆದರೆ, ವಾಸ್ತವಾಂಶವಾಗಿ ಸಾಲಮನ್ನಾದ ಒಳಗೆ ಏನು ಇಲ್ಲ ಎಂದು ಲೇವಡಿ ಮಾಡಿದರು.

ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ, ಸಹಕಾರ ಬ್ಯಾಂಕ್‌ಗಳಲ್ಲಿ 2017ರ ಡಿ.31ಕ್ಕೆ 561 ಕೋಟಿ ರು.ಸುಸ್ತಿ ಸಾಲ ಇದೆ. 10,734 ಕೋಟಿ ರು. ಚಾಲ್ತಿ ಸಾಲ ಇದೆ. ರೈತರ ಚಾಲ್ತಿ ಸಾಲ ಮನ್ನಾ ಮಾಡದಿದ್ದರೆ ಯಾವುದೇ ಉಪಯೋಗ ಇಲ್ಲ. ಈ ಅಂಕಿ-ಅಂಶವನ್ನು ಡಿಸಿಸಿ ಬ್ಯಾಂಕ್‌ಗಳಿಂದ ತರಿಸಲಾಗಿದೆ. ಇದು ಸುಳ್ಳೇ ಎಂಬುದನ್ನು ಸರ್ಕಾರ ತಿಳಿಸಬೇಕು ಎಂದು ಒತ್ತಾಯಿಸಿದರು.