Asianet Suvarna News Asianet Suvarna News

ಸಿದ್ದರಾಮಯ್ಯ ವಿರುದ್ಧ ಶೆಟ್ಟರ್ ಗರಂ ಆಗಿದ್ದೇಕೆ..?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇನ್ನೋರ್ವ ಮಾಜಿ ಸಿಎಂ ಹಾಗೂ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಗರಂ ಆಗಿದ್ದಾರೆ. ವಿಧಾನಸೌಧದಲ್ಲಿ ಕೊಠಡಿ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

Jagadish Sehetter Slams CM Siddaramaiah
Author
Bengaluru, First Published Jul 11, 2018, 7:38 AM IST

ವಿಧಾನಸಭೆ :  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಧಾನಸೌಧದಲ್ಲಿ ಕೊಠಡಿ ನೀಡಿರುವುದಕ್ಕೆ ಮಾಜಿ ಮುಖ್ಯಮಂತ್ರಿಯೂ ಆಗಿರುವ ಪ್ರತಿಪಕ್ಷ ಬಿಜೆಪಿಯ ಹಿರಿಯ ಶಾಸಕ ಜಗದೀಶ್‌ ಶೆಟ್ಟರ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನಾನು ಸಹ ಮಾಜಿ ಮುಖ್ಯಮಂತ್ರಿಯಾಗಿರುವುದರಿಂದ ನನಗೂ ಒಂದು ಕೊಠಡಿ ಕೊಡಿ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಮಂಗಳವಾರ ಮಧ್ಯಾಹ್ನ ಭೋಜನದ ನಂತರ ಕಲಾಪ ಆರಂಭವಾಗುತ್ತಿದ್ದಂತೆ ಜಗದೀಶ್‌ ಶೆಟ್ಟರ್‌ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಅವರಿಗೆ ವಿಧಾನಸೌಧದಲ್ಲಿ ಪ್ರತ್ಯೇಕ ಕೊಠಡಿ ನೀಡಲಾಗಿದೆ. ಸಮನ್ವಯ ಸಮಿತಿ ಅಧ್ಯಕ್ಷರಿಗೆ ವಿಧಾನಸೌಧದಲ್ಲಿ ಕೊಠಡಿ ಕೊಡಲು ಅವಕಾಶವಿದೆಯೇ? ಸಮನ್ವಯ ಸಮಿತಿ ಅಧ್ಯಕ್ಷರ ಹುದ್ದೆಯ ಬಗ್ಗೆ ಸರ್ಕಾರದಿಂದ ನೊಟೀಫಿಕೇಷನ್‌ ಆಗಿದೆಯೇ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಎಂಬ ಕಾರಣಕ್ಕಾಗಿ ವಿಧಾನಸೌಧದಲ್ಲಿ ಕೊಠಡಿ ನೀಡಿದ್ದರೆ, ತಾವು ಸಹ ಮಾಜಿ ಮುಖ್ಯಮಂತ್ರಿ. ನನಗೂ ವಿಧಾನಸೌಧದಲ್ಲಿ ಕೊಠಡಿ ಕೊಡಿ ಎಂದು ವ್ಯಂಗ್ಯವಾಡಿದ ಅವರು, ಇದೊಂದು ರೀತಿ ಜಾತ್ರೆ ರೀತಿಯಾಗಿದೆ. ಇದು ಹೇಗೆ ಸಾಧ್ಯ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕೊಠಡಿ ನೀಡುವ ಬಗ್ಗೆ ಸರ್ಕಾರದಿಂದ ನಿರ್ಣಯವಾಗಿದೆಯೇ? ಇದು ಸಿದ್ದರಾಮಯ್ಯ ಅವರ ವೈಯಕ್ತಿಕ ವಿಚಾರ ಅಲ್ಲ. ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕೊಠಡಿ ನೀಡಬಹುದೇ ಎಂಬುದು ಪ್ರಶ್ನೆ ಎಂದು ಸರ್ಕಾರ ವಿರುದ್ಧ ಕಿಡಿಕಾರಿದರು.

ಜಗದೀಶ್‌ ಶೆಟ್ಟರ್‌ ಅವರು ಈ ವಿಚಾರ ಪ್ರಸ್ತಾಪಿಸಿದಾಗ ಆಡಳಿತ ಪಕ್ಷದ ಸಾಲಿನಲ್ಲಿ ಮೂವರು ಸಚಿವರು, ಬೆರಳೆಣಿಕೆಯಷ್ಟು ಶಾಸಕರಿದ್ದರು. ಇದನ್ನು ಗಮನಿಸಿದ ಬಿಜೆಪಿಯ ಅರವಿಂದ ಲಿಂಬಾವಳಿ, ನೀರು ಯಾರಿಗೆ ಈ ವಿಚಾರ ಹೇಳುತ್ತಿದ್ದೀರಿ ಎಂದು ಶೆಟ್ಟರ್‌ ಅವರನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಗದೀಶ್‌ ಶೆಟ್ಟರ್‌, ಸಮ್ಮಿಶ್ರ ಸರ್ಕಾರದ ಮೊದಲ ಅಧಿವೇಶನದಲ್ಲಿ ಸಚಿವರು, ಶಾಸಕರಿಲ್ಲದೇ ಈ ಪರಿಸ್ಥಿತಿ. ಮುಂದೆ ಯಾರೂ ಬರುವುದಿಲ್ಲ ಎಂದು ಟೀಕಿಸಿದರು.

ಜಗದೀಶ್‌ ಶೆಟ್ಟರ್‌ ಪ್ರಶ್ನೆಗೆ ಉತ್ತರ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕೊಠಡಿ ನೀಡಿರುವ ವಿಷಯ ಡಿಪಿಆರ್‌ ವ್ಯಾಪ್ತಿಗೆ ಬರುತ್ತದೆ. ಈ ಇಲಾಖೆ ಮುಖ್ಯಮಂತ್ರಿಗಳ ವ್ಯಾಪ್ತಿಗೆ ಬರುವುದರಿಂದ ಅವರಿಂದ ಉತ್ತರ ಕೊಡಿಸಲಾಗುವುದು ಎಂದು ಸಮಜಾಯಿಸಿ ನೀಡಿದರು.

ಇದಕ್ಕೆ ಒಪ್ಪದ ಜಗದೀಶ್‌ ಶೆಟ್ಟರ್‌, ಮುಖ್ಯಮಂತ್ರಿಗಳೇ ಏಕೆ ಉತ್ತರಿಸಬೇಕು? ನೀವೇ ಕೊಡಬಹುದಲ್ಲಾ ಎಂದು ತೀಕ್ಷ$್ಣವಾಗಿ ಹೇಳಿದರು. ಬಳಿಕ ಸಚಿವರು, ನಾನೇ ಮಾಹಿತಿ ಪಡೆದು ಉತ್ತರ ಕೊಡುತ್ತೇನೆ ಎಂದು ಹೇಳಿದಾಗ ಚರ್ಚೆಗೆ ಇತಿಶ್ರೀ ಹಾಡಲಾಯಿತು.

Follow Us:
Download App:
  • android
  • ios