ಅಂಡಾಶಯದ ಕ್ಯಾನ್ಸರ್ ಆಕೆಯ ಯಕೃತ್‌ಗೂ ಹರಡಿತ್ತು. 40 ವರ್ಷಗಳಿಂದ ಕಂಪೆನಿಯ ಟಾಲ್ಕಂ ಪೌಡರ್ ಮತ್ತು ಶವರ್ ಟು ಶವರ್ ಪೌಡರ್ ಬಳಸಿದುದರಿಂದ ತನಗೆ ಕ್ಯಾನ್ಸರ್ ಬಂದಿದೆ ಎಂದು ಆಕೆ ಪ್ರತಿಪಾದಿಸಿದ್ದರು. ಈ ಪ್ರಕರಣದ ಕುರಿತು ಇದೀಗ ನ್ಯಾಯಾಲಯ ತೀರ್ಪು ನೀಡಿದೆ.

ಸೆಂಟ್‌ಲೂಯಿಸ್(ಮೇ.05): ವಿಶ್ವದಾದ್ಯಂತ ನವಜಾತ ಮಕ್ಕಳಿಗೆ ಬಹುವಾಗಿ ಬಳಸುವ ಜಾನ್ಸನ್ ಆ್ಯಂಡ್ ಜಾನ್ಸನ್ ಪೌಡರ್ ಕಂಪನಿಗೆ ಅಮೆರಿಕದ ನ್ಯಾಯಾಲಯವೊಂದು ಭರ್ಜರಿ 710 ಕೋಟಿ ರು. ದಂಡ ವಿಧಿಸಿದೆ.

ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್ ಬಳಕೆ ಕ್ಯಾನ್ಸರ್‌ಗೆ ಕಾರಣವಾಗಿದೆ ಎಂದು ಆಪಾದಿಸಿ ವರ್ಜೀನಿಯಾ ಮೂಲದ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸೆಂಟ್‌ಲೂಯಿಸ್‌ನ ನ್ಯಾಯಾಲಯ, ಮಹಿಳೆಗೆ 710 ಕೋಟಿ ರು. ಹಣವನ್ನು ಪರಿಹಾರದ ರೂಪದಲ್ಲಿ ನೀಡುವಂತೆ ಆದೇಶಿಸಿದೆ.

2012ರಲ್ಲಿ ಲೂಯಿಸ್ ಸ್ಲೆಂಪ್ (62) ಅಂಡಾಶಯದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಂಡಿದ್ದಳು. ಅಂಡಾಶಯದ ಕ್ಯಾನ್ಸರ್ ಆಕೆಯ ಯಕೃತ್‌ಗೂ ಹರಡಿತ್ತು. 40 ವರ್ಷಗಳಿಂದ ಕಂಪೆನಿಯ ಟಾಲ್ಕಂ ಪೌಡರ್ ಮತ್ತು ಶವರ್ ಟು ಶವರ್ ಪೌಡರ್ ಬಳಸಿದುದರಿಂದ ತನಗೆ ಕ್ಯಾನ್ಸರ್ ಬಂದಿದೆ ಎಂದು ಆಕೆ ಪ್ರತಿಪಾದಿಸಿದ್ದರು. ಈ ಪ್ರಕರಣದ ಕುರಿತು ಇದೀಗ ನ್ಯಾಯಾಲಯ ತೀರ್ಪು ನೀಡಿದೆ.

ಈ ಟಾಲ್ಕಂ ಪೌಡರ್ ಬಳಕೆಯಿಂದ ಆರೋಗ್ಯ ಸಮಸ್ಯೆಗೆ ಕಾರಣವಾದ ಬಗ್ಗೆ ಅಮೆರಿಕದಾದ್ಯಂತ ಸುಮಾರು 2,000 ಮಂದಿ ಇಂಥಹುದೇ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ವಿವಾದಿತ ವೈಜ್ಞಾನಿಕ ಸಾಕ್ಷ್ಯವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದ್ದು, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಜಾನ್ಸನ್ ಆ್ಯಂಡ್ ಜಾನ್ಸನ್ ತಿಳಿಸಿದೆ.