ವಾರ್ಷಿಕ 10 ಲಕ್ಷ ರೂ.ಗಿಂತ ಹೆಚ್ಚಿನ ವರಮಾನ ಹೊಂದಿರುವ ತೆರಿಗೆದಾರರಿಗೆ ಹೊಸದೊಂದು ಶಾಕ್​ ಕಾದಿದೆ. 10 ಲಕ್ಷಕ್ಕಿಂದ ಹೆಚ್ಚಿನ ಆದಾಯ ಹೊಂದಿರುವವರನ್ನು ಎಲ್‌ಪಿಜಿ ಸಬ್ಸಿಡಿ ಸೌಲಭ್ಯದಿಂದ ಹೊರಗಿಡಲು ಸರ್ಕಾರ ಮುಂದಾಗಿದೆ.

ನವದೆಹಲಿ(ಡಿ.20): ವಾರ್ಷಿಕ 10 ಲಕ್ಷ ರೂ.ಗಿಂತ ಹೆಚ್ಚಿನ ವರಮಾನ ಹೊಂದಿರುವ ತೆರಿಗೆದಾರರಿಗೆ ಹೊಸದೊಂದು ಶಾಕ್​ ಕಾದಿದೆ. 10 ಲಕ್ಷಕ್ಕಿಂದ ಹೆಚ್ಚಿನ ಆದಾಯ ಹೊಂದಿರುವವರನ್ನು ಎಲ್‌ಪಿಜಿ ಸಬ್ಸಿಡಿ ಸೌಲಭ್ಯದಿಂದ ಹೊರಗಿಡಲು ಸರ್ಕಾರ ಮುಂದಾಗಿದೆ.

ಎಲ್‌'ಪಿಜಿ ಅಡುಗೆ ಅನಿಲಕ್ಕೆ ಕೇಂದ್ರ ಸರಕಾರ ನೀಡುತ್ತಿರುವ ಸಬ್ಸಿಡಿ ದುರುಪಯೋಗವನ್ನು ಪತ್ತೆ ಹಚ್ಚುವ ಉದ್ದೇಶದಿಂದ, ಇವೆರಡು ಇಲಾಖೆಗಳು ತೆರಿಗೆದಾರರ ಆದಾಯ ಪರಿಶೀಲನೆಗೆ ಮುಂದಾಗುತ್ತಿವೆ. ವಾರ್ಷಿಕ 10 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವ ವೈಯಕ್ತಿಕ ತೆರಿಗೆದಾರರ ವಿವರವನ್ನು ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಜತೆ ಅತಿ ಶೀಘ್ರವೇ ವಿನಿಮಯ ಮಾಡಿಕೊಳ್ಳಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ.

ಐಟಿ ಇಲಾಖೆ ವೈಯಕ್ತಿಕ ತೆರಿಗೆದಾರರ ಕರ ಮಾಹಿತಿಯ ಜತೆಗೆ, ಆತನ ಪ್ಯಾನ್‌ ಸಂಖ್ಯೆ, ಜನ್ಮ ದಿನಾಂಕ, ಲಭ್ಯವಿರುವ ಎಲ್ಲಾ ವಿಳಾಸ, ಇ-ಮೇಲ್‌ ಐಡಿ, ಮೊಬೈಲ್‌ ಸಂಖ್ಯೆ ಸೇರಿದಂತೆ ಸಮಗ್ರ ಮಾಹಿತಿಯನ್ನು ಪೆಟ್ರೋಲಿಯಂ ಸಚಿವಾಲಯಕ್ಕೆ ಒದಗಿಸಲಿದೆ. ತೆರಿಗೆದಾರನ ಮಾಹಿತಿ ವಿನಿಮಿಯವನ್ನು ಗೌಪ್ಯ ಮತ್ತು ಸುರಕ್ಷಿತವಾಗಿರಿಸುವ ಸಲುವಾಗಿ ಐಟಿ ಇಲಾಖೆ ಶೀಘ್ರವೇ ಪೆಟ್ರೋಲಿಯಂ ಸಚಿವಾಲಯದ ಜತೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಿದೆ.

ಐಟಿ ಇಲಾಖೆಯಿಂದ ಮಾಹಿತಿ ವಿನಿಮಯ ಮಾಡಿಕೊಂಡ ನಂತರ ವಾರ್ಷಿಕ 10 ಲಕ್ಷ ರೂ.ಗಿಂತ ಹೆಚ್ಚಿನ ವರಮಾನವಿರುವ ತೆರಿಗೆದಾರರನ್ನು ಎಲ್‌ಪಿಜಿ ಸಬ್ಸಿಡಿ ಸೌಲಭ್ಯದಿಂದ ನಿರ್ಬಂಧಿಸುವುದು ಸರಕಾರದ ಉದ್ದೇಶವಾಗಿದೆ.