ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯದ ಹಲವು ಮುಖಂಡರಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದರು. ಇದೀಗ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಬೆಂಬಲಿಗರ ಮನೆ ಮೇಲೆ ಐಟಿ ದಾಳಿಯಾಗಿದೆ.
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಗುರುತಿಸಿಕೊಂಡಿದ್ದ ಕೆ.ಆರ್.ಪೇಟೆ ಪುರಸಭೆಯ ಮಾಜಿ ಅಧ್ಯಕ್ಷ ಚಕ್ರಪಾಣಿ ಅವರ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ.
ಚಕ್ರಪಾಣಿ ಅವರು ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸಹೋದರಿಯ ಪುತ್ರ. ಕೆ.ಆರ್.ಪೇಟೆ ತಾಲೂಕಿನ ಕುಪ್ಪಹಳ್ಳಿ ಗ್ರಾಮದ ಅವರ ತೋಟದ ಮನೆಯ ಮೇಲೆ ಗುರುವಾರ ಸಂಜೆ ನಾಲ್ಕು ಗಂಟೆಗೆ ಹದಿನೈದು ಮಂದಿ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ಚಕ್ರಪಾಣಿ ಅವರು ಮನೆಯಲ್ಲಿರದ ಕಾರಣ ಕೆಲ ಅಧಿಕಾರಿಗಳು ಅವರ ಮನೆಯ ಮುಂದೆಯೇ ಬೀಡು ಬಿಟ್ಟಿದ್ದರು. ನಂತರ ಚಕ್ರಪಾಣಿ ಅವರನ್ನು ಪೊಲೀಸರ ಸಹಾಯದಿಂದ ಕರೆತಂದು ರಾತ್ರಿ 10 ಗಂಟೆಯ ತನಕ ದಾಖಲೆಗಳನ್ನು ಪರಿಶೀಲಿಸಿ ನಂತರ ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಉಡುಪಿಯಲ್ಲೂ ಐಟಿ ದಾಳಿ:
ಉಡುಪಿಯ ಉದ್ಯಾವರದ ಕಟ್ಟೆಗುಡ್ಡೆ ಎಂಬಲ್ಲಿನ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮನೆ ಮೇಲೂ ಆದಾಯ ತೆರಿಗೆ ಇಲಾಖೆ ಗುರುವಾರ ದಾಳಿ ನಡೆಸಿದೆ. ಉದ್ಯಾವರ ಪಂಚಾಯಿತಿ ಸದಸ್ಯಲಕ್ಷ್ಮಣ ಏಣಗುಡ್ಡೆ ಮತ್ತು ಫೈನಾನ್ಸ್ ಒಂದರ ಉದ್ಯೋಗಿ ಸದಾಶಿವ ಕಟ್ಟೆಗುಡ್ಡೆ ಎಂಬವರ ಮೇಲೆ ಮಧ್ಯಾಹ್ನ 2.30ಕ್ಕೆ ಪ್ರತ್ಯೇಕ ವಾಹನಗಳಲ್ಲಿ ಆಗಮಿಸಿದ ಐಟಿ ಅಧಿಕಾರಿಗಳು, ಸಂಜೆ 7 ಗಂಟೆಯವರೆಗೆ ಹುಡುಕಾಟ ನಡೆಸಿದ್ದಾರೆ ಮತ್ತು ಒಂದಷ್ಟುದಾಖಲೆ, ಕಾಗದಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಹೆಚ್ಚಿನ ವಿಚಾರಣೆಗಾಗಿ ಇಬ್ಬರನ್ನೂ ತಮ್ಮ ಇಲಾಖೆಯ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಲಕ್ಷ್ಮಣ ಅವರು ಲ್ಯಾಂಡ್ ಲಿಂಕ್ ವ್ಯವಹಾರವನ್ನು ನಡೆಸುತ್ತಿದ್ದರೆ, ಸದಾಶಿವ ಅವರು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಆಪ್ತರು ಎನ್ನಲಾಗಿದೆ. ಆದರೆ ಐಟಿ ದಾಳಿ ನಡೆಸುವಷ್ಟುಶ್ರೀಮಂತರಲ್ಲ, ಯಾರೋ ಅವರಿಗೆ ಆಗದವರು ದೂರು ನೀಡಿ ದಾಳಿ ಮಾಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
