ಮೈಸೂರು[ಮಾ.28]: ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ ಹೀಗಿರುವಾಗ ತೆರಿಗೆ ಇಲಾಖೆ ಅಧಿಕಾರಿಗಳು ರಾಜ್ಯದ ಪ್ರಭಾವಿ ವ್ಯಕ್ತಿಗಳ ಮನೆ ಮೇಲೆ ಐಟಿ ದಾಳಿ ನಡೆಸಬಹುದೆಂಬ ಮಾತುಗಳನ್ನಾಡಿದ್ದರು. ಇದೀಗ ಕುಮಾರಸ್ವಾಮಿಯುವರು ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸಿಎಂ ಆಪ್ತ ಸಿ.ಎಸ್. ಪುಟ್ಟರಾಜು ಮತ್ತವರ ಸಂಬಂಧಿಕರ ಮೇಲೆ ತೆರಿಗೆ ದಾಳಿ ನಡೆದಿದೆ.

ನಿನ್ನೆ ತಡರಾತ್ರಿಯಿಂದ ಐಟಿ ತಂಡ ರಾಜ್ಯದ ಹಲವೆಡೆ ದಾಳಿ ನಡೆಸಿದ್ದು, ಇಂದು ಬೆಳ್ಳಂ ಬೆಳಿಗ್ಗೆ ಸಚಿವ ಸಿ. ಎಚ್ ಪುಟ್ಟರಾಜು ಹಾಗೂ ಅವರ ಸಂಬಂಧಿಕರ ಮೇಲೆ ದಾಳಿ ನಡೆಸಿದೆ. ಪುಟ್ಟರಾಜು ಅಣ್ಣನ ಮಗ ಜಿಲ್ಲಾ ಪಂಚಾಯತ್ ಸದಸ್ಯ ಅಶೋಕ್ ಹಾಗೂ ಪುಟ್ಟರಾಜು ಸ್ವಗ್ರಾಮ ಚಿನಕುರಳಿಯಲ್ಲಿರುವ ಮನೆ ಮೇಲೂ ಐಟಿ ದಾಳಿ ನಡೆದಿದೆ

ಬುಧವಾರ ರಾತ್ರಿಯೂ ಉದ್ಯಮಿಗಳ ಮನೆಗಳ ಮೇಲೆ ಐಟಿ ಕಾರ್ಯಾಚರಣೆ ನಡೆದಿದೆ. ಜಯನಗರ, ಬಸವನಗುಡಿ, ಜೆ.ಪಿ.ನಗರ ಸೇರಿದಂತೆ ನಗರದ ವಿವಿಧೆಡೆ ಉದ್ಯಮಿಗಳಿಗೆ ಐಟಿ ಚಾಟಿ ಬೀಸಿದ್ದು, ಇದರಲ್ಲಿ ಪ್ರಮುಖವಾಗಿ ಜಯನಗರದ ಸೌತ್ ಎಂಡ್ ಸರ್ಕಲ್ ಹತ್ತಿರದಲ್ಲಿರುವ ಮುಖ್ಯಮಂತ್ರಿಗಳ ಆಪ್ತ ಎನ್ನಲಾದ ಉದ್ಯಮಿ ಸಿದ್ದಿಕ್ ಸೇಠ್ ನಿವಾಸದಲ್ಲೂ ಐಟಿ ಶೋಧ ನಡೆಸಿದೆ ಎಂದು ತಿಳಿದು ಬಂದಿದೆ.

ಕುಮಾರಸ್ವಾಮಿ ಹೇಳಿದ್ದೇನು?

ಆದಾಯ ತೆರಿಗೆ ಇಲಾಖೆಯ ಕರ್ನಾಟಕ- ಗೋವಾ ವಿಭಾಗದ ಮುಖ್ಯಸ್ಥ ಬಿ.ಆರ್‌. ಬಾಲಕೃಷ್ಣನ್‌ ಅವರು 250 ರಿಂದ 300 ಮಂದಿ ಅಧಿಕಾರಿಗಳನ್ನು ಕಲೆ ಹಾಕಿಕೊಂಡು ರಾಜ್ಯದಲ್ಲಿ ಐಟಿ ದಾಳಿಗೆ ಸಿದ್ಧವಾಗಿದ್ದಾರೆ. ರಾಜ್ಯದ ಪೊಲೀಸರ ಸಹಕಾರ ಕೋರಿದರೆ ಸರ್ಕಾರಕ್ಕೆ ಎಲ್ಲಿ ಮಾಹಿತಿ ಸೋರಿಕೆಯಾಗುತ್ತದೆಯೋ ಎಂಬ ಭಯದಿಂದ ಭದ್ರತೆಗಾಗಿ ಸಿಆರ್‌ಪಿಎಫ್‌ನ ನೆರವು ಕೇಳಿದ್ದಾರೆ. ರಾಜ್ಯ, ಹೊರ ರಾಜ್ಯಗಳಿಂದ ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ಈಗಾಗಲೇ ಏರ್‌ಪೋರ್ಟಿಗೆ ಕರೆಸಿಕೊಂಡಿದ್ದಾರೆ. ಏರ್‌ಪೋರ್ಟ್‌ನಲ್ಲಿ ಈ ಅಧಿಕಾರಿಗಳನ್ನು ಪಿಕ್‌ಅಪ್‌ ಮಾಡಲು 300 ಕ್ಯಾಬ್‌ಗಳನ್ನೂ ಬುಕ್‌ ಮಾಡಲಾಗಿದೆ ಎಂಬ ಮಾಹಿತಿ ನನಗೆ ಸಿಕ್ಕಿದೆ. ಈ ದಾಳಿ ಕಾಂಗ್ರೆಸ್‌ ಅಥವಾ ಜೆಡಿಎಸ್‌ ಅಭಿಮಾನಿಗಳ ಮೇಲೆ ಆಗಬಹುದು. ಐಟಿ ದಾಳಿಯ ಮಾಹಿತಿಯನ್ನು ಬಿಜೆಪಿಯಲ್ಲಿರುವ ನನ್ನ ಆತ್ಮೀಯ ನಾಯಕರೊಬ್ಬರೇ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದಿದ್ದರು.

ಇಂತಹ ದಾಳಿ ನಡೆದರೆ ನಡೆಸಿದರೆ ಮಮತಾ ಬ್ಯಾನರ್ಜಿ ರೀತಿ ಪ್ರತಿಭಟನೆ ನಡೆಸುವುದಾಗಿಯೂ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದರು.