ಸಾಮಾನ್ಯವಾಗಿ ಕಡಿಮೆ ಠೇವಣಿ ಇರುತ್ತಿದ್ದ ಖಾತೆಗಳಿಗೆ ದಿಢೀರನೇ ಲಕ್ಷಾಂತರ ರೂಪಾಯಿ ಹಣ ಜಮೆ ಆಗಿದ್ದು ಕಂಡು ಬಂದ ಪ್ರಕರಣಗಳನ್ನು ಆಯಾ ಬ್ಯಾಂಕುಗಳು ಐಟಿ ಗಮನಕ್ಕೆ ತರುತ್ತಿವೆ.
ನವದೆಹಲಿ(ನ. 20): ಕರೆನ್ಸಿ ಅಮಾನ್ಯಗೊಳಿಸಿ ಘೋಷಣೆ ಹೊರಡಿಸಿದ ನ.8ರ ನಂತರ ಬ್ಯಾಂಕ್ ಖಾತೆಗಳಿಗೆ ದೊಡ್ಡ ಮೊತ್ತದ ನಿಷೇಧಿತ ನೋಟುಗಳನ್ನು ಹಾಕಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಐಟಿ ನೋಟೀಸ್ ನೀಡಿದೆ. ಇಷ್ಟು ದೊಡ್ಡ ಪ್ರಮಾಣದ ಹಣಕ್ಕೆ ಮೂಲ ಯಾವುದೆಂದು ಪ್ರಶ್ನಿಸಿ ಆದಾಯ ತೆರಿಗೆ ಇಲಾಖೆಯು ನೋಟೀಸ್ ನೀಡಿದೆ ಎನ್ನಲಾಗಿದೆ.
ಸಾಮಾನ್ಯವಾಗಿ ಕಡಿಮೆ ಠೇವಣಿ ಇರುತ್ತಿದ್ದ ಖಾತೆಗಳಿಗೆ ದಿಢೀರನೇ ಲಕ್ಷಾಂತರ ರೂಪಾಯಿ ಹಣ ಜಮೆ ಆಗಿದ್ದು ಕಂಡು ಬಂದ ಪ್ರಕರಣಗಳನ್ನು ಆಯಾ ಬ್ಯಾಂಕುಗಳು ಐಟಿ ಗಮನಕ್ಕೆ ತರುತ್ತಿವೆ. ಇಂಥ ಪ್ರಕರಣಗಳನ್ನು ಪರಿಶೀಲಿಸುತ್ತಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಆ ಖಾತೆದಾರರಿಗೆ ನೋಟೀಸ್ ನೀಡುತ್ತಿದ್ದಾರೆ. ಸರಕಾರ ಘೋಷಿಸಿರುವ ಪ್ರಕಾರ, 2.5 ಲಕ್ಷಕ್ಕಿಂತ ಹೆಚ್ಚು ಮೌಲ್ಯದ 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಖಾತೆಗೆ ಜಮೆ ಮಾಡಿದರೆ, ಆ ಹಣದ ಮೂಲದ ಬಗ್ಗೆ ಸೂಕ್ತ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.
ಇದೇ ವೇಳೆ, ಕಪ್ಪುಹಣದ ಚಲಾವಣೆ ಹೆಚ್ಚಾಗರುವ ರಿಯಲ್ ಎಸ್ಟೇಟ್, ಸ್ಟಾಕ್ ಮಾರ್ಕೆಟ್ ಮತ್ತು ಹವಾಲಾ ನೆಟ್ವರ್ಕ್'ಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತೀವ್ರ ನಿಗಾ ಇರಿಸಿದ್ದಾರೆ. ಕಪ್ಪುಹಣವನ್ನು ಬಿಳಿ ಮಾಡುತ್ತಿವೆ ಎನ್ನಲಾದ ಸಹಕಾರಿ ಬ್ಯಾಂಕುಗಳ ಮೇಲೆಯೂ ಐಟಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಕೋಆಪರೇಟಿವ್ ಬ್ಯಾಂಕುಗಳಲ್ಲಿ ಕಪ್ಪುಹಣವನ್ನು ಹೇಗೆ ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಸುವರ್ಣನ್ಯೂಸ್'ನ ಕವರ್ ಸ್ಟೋರಿ ತಂಡ ಸ್ಟಿಂಗ್ ಆಪರೇಷನ್ ಮಾಡಿ ನಿನ್ನೆ ಪ್ರಸಾರ ಮಾಡಿತ್ತು. ವಾಹಿನಿಯ ವರದಿ ಬಳಿಕ ಐಟಿ ಅಧಿಕಾರಿಗಳು ಇನ್ನಷ್ಟು ಜಾಗೃತಗೊಂಡಿದ್ದು, ವಿವಿಧ ಕಡೆ ದಾಳಿಗಳನ್ನು ನಡೆಸಿ ಕಾಳಧನಿಕರನ್ನು ಹಿಡಿಯಲು ಯತ್ನಿಸುತ್ತಿದ್ದಾರೆ.
