ಲಖೀಂಪುರ (ಅಸ್ಸಾಂ): ‘ಪುಲ್ವಾಮದಲ್ಲಿ ಉಗ್ರರ ದಾಳಿಗೆ ಬಲಿಯಾದ ಸಿಆರ್‌ಪಿಎಫ್‌ನ 40 ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ. ಈಗ ಕೇಂದ್ರದಲ್ಲಿರುವುದು ಬಿಜೆಪಿ ಸರ್ಕಾರವೇ ವಿನಾ ಕಾಂಗ್ರೆಸ್‌ ಸರ್ಕಾರವಲ್ಲ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ. ಶಾ ಅವರ ಹೇಳಿಕೆ ಕಾಂಗ್ರೆಸ್‌ ಕೆಂಗಣ್ಣಿಗೆ ಗುರಿಯಾಗಿದ್ದು, ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಯುವ ಮೋರ್ಚಾ ಭಾನುವಾರ ಅಸ್ಸಾಂನಲ್ಲಿ ಆಯೋಜಿಸಿದ್ದ ರಾರ‍ಯಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್‌ ಶಾ, ಪರೋಕ್ಷವಾಗಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆ ಅತ್ಯಂತ ಹೀನಾಯವಾಗಿ ನಮ್ಮ ಯೋಧರನ್ನು ಪಡೆದುಕೊಂಡಿದೆ. ಇದಕ್ಕೆ ಪ್ರತೀಕಾರ ಶತಸಿದ್ಧ. ದಾಳಿಯಲ್ಲಿ ಹುತಾತ್ಮರಾದ ಪ್ರತಿಯೊಬ್ಬ ಯೋಧನ ತ್ಯಾಗ ವ್ಯರ್ಥವಾಗಲು ಬಿಡೆವು. ಯಾಕೆಂದರೆ ಈಗ ಕೇಂದ್ರದಲ್ಲಿರುವುದು ಕಾಂಗ್ರೆಸ್‌ ಸರ್ಕಾರವಲ್ಲ, ಇದು ಬಿಜೆಪಿ ಸರ್ಕಾರ. ದೇಶದ ಭದ್ರತೆ ವಿಚಾರವಾಗಿ ಯಾವುದೇ ರೀತಿಯ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಉಗ್ರರ ವಿರುದ್ಧ ಸೆಟೆದೇಳುವ, ವಿಶ್ವದ ಯಾವ ನಾಯಕರಲ್ಲೂ ಇಲ್ಲದ ಆತ್ಮವಿಶ್ವಾಸ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿದೆ ಎಂದು ಸಮರ್ಥಿಸಿಕೊಂಡರು.

‘ಇಂಥ ಸನ್ನಿವೇಶದಲ್ಲಿ ಕಾಂಗ್ರೆಸ್‌ ಈವರೆಗೆ ನಿರ್ವಹಿಸಿದ ರೀತಿಗಿಂತ ಭಿನ್ನವಾಗಿ ನಿರ್ವಸುತ್ತೇವೆ. ಭದ್ರತೆ ವಿಚಾರವಾಗಿ ಯಾವುದೇ ಕಾರಣಕ್ಕೂ ಸಹಿಸಿಕೊಂಡು ಕುಳಿತಿರುವ ಪ್ರಮೇಯವೇ ಇಲ್ಲ’ ಎಂದು ಶಾ ಹೇಳಿದರು.

‘ಪಾಕಿಸ್ತಾನಕ್ಕೆ ರಾಜತಾಂತ್ರಿಕ ಮಾರ್ಗದಲ್ಲಿ ನೀಡಬಹುದಾದ ಎಚ್ಚರಿಕೆಯನ್ನು ಈಗಾಗಲೇ ಭಾರತ ನೀಡಿದೆ. ಬುಲೆಟ್‌ ಮತ್ತು ಸರ್ಜಿಕಲ್‌ ಸ್ಟೆ್ರೖಕ್‌ ಮೂಲಕವೂ ಈ ಹಿಂದೆ ಪಾಠ ಕಲಿಸಿದೆ. ಮುಂದೆಯೂ ಪಾಕಿಸ್ತಾನ ಉಗ್ರರಿಗೆ ತಕ್ಕ ಪಾಠ ಕಲಿಸಲಿದ್ದೇವೆ’ ಎಂದು ಅವರು ನುಡಿದರು.