ತುರ್ತು ಭೂಸ್ಪರ್ಶ ಮಾಡಿದ ಇಸ್ರೇಲ್ ಖಾಸಗಿ ಜೆಟ್! 10 ಗಂಟೆಗಳ ಕಾಲ ಸಂಪರ್ಕಕ್ಕೆ ಬಾರದ ವಾಣಿಜ್ಯ ವಿಮಾನ! ಪಾಕಿಸ್ತಾನದಲ್ಲಿ ಸೃಷ್ಟಿಯಾಗಿದೆ ಕೋಲಾಹಲ! ಜೆಟ್ ಭೂಸ್ಪರ್ಶ ಅಲ್ಲಗಳೆದ ಪಾಕಿಸ್ತಾನ ಸರ್ಕಾರ
ಇಸ್ಲಾಮಾಬಾದ್(ಅ.28): ಪಾಕಿಸ್ತಾನದಲ್ಲಿ ಇಸ್ರೇಲ್ ನ ಖಾಸಗಿ ಜೆಟ್ ಭೂಸ್ಪರ್ಶ ಮಾಡಿದ್ದು ಕೋಲಾಹಲ ಉಂಟು ಮಾಡಿದೆ.
ಆದರೆ ಪಾಕ್ ಸರ್ಕಾರ ಮಾತ್ರ ಮಾಧ್ಯಮಗಳಿಗೆ ಇಸ್ರೇಲ್ ಜೆಟ್ ಯಾವುದೂ ತನ್ನ ನೆಲದಲ್ಲಿ ಭೂಸ್ಪರ್ಶ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಮಧ್ಯೆ ಇಸ್ರೇಲ್ ನ ಪತ್ರಿಕೆಯ ಆಂಗ್ಲ ಆವೃತ್ತಿಯ ಸಂಪಾದಕರೊಬ್ಬರು ಇಸ್ರೇಲ್ ನ ಜೆಟ್ ಪಾಕಿಸ್ತಾನದಲ್ಲಿ ಭೂಸ್ಪರ್ಶ ಮಾಡಿರುವ ಬಗ್ಗೆ ಟ್ವೀಟ್ ಮಾಡಿದ್ದು ಮಾಹಿತಿಯನ್ನೂ ಬಹಿರಂಗಪಡಿಸಿದ್ದಾರೆ.
ಪಾಕಿಸ್ತಾನದಲ್ಲಿ ಇಳಿದಿದ್ದ ಇಸ್ರೇಲ್ ವಾಣಿಜ್ಯ ವಿಮಾನವೊಂದು 10 ಗಂಟೆಗಳ ಕಾಲ ಸಂಪರ್ಕದಲ್ಲಿ ಸಿಕ್ಕಿರಲಿಲ್ಲ, ಆ ನಂತರ ವಾಪಸ್ ಟೆಲ್ ಅವೀವ್ ಗೆ ಬಂದಿದೆ ಎಂದು ಇಸ್ರೇಲ್ ನ ಪತ್ರಿಕೆಯ ಸಂಪಾದಕರು ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನ-ಇಸ್ರೇಲ್ ನಡುವೆ ಹೇಳಿಕೊಳ್ಳುವಂತಹ ದ್ವಿಪಕ್ಷೀಯ ಸಂಬಂಧ ಇಲ್ಲ. ಹೀಗಿದ್ದರೂ ಇಸ್ರೇಲ್ ನ ವಿಮಾನವೊಂದು ಇಸ್ಲಾಮಾಬಾದ್ ನಲ್ಲಿ ಬಂದಿಳಿದು 10 ಗಂಟೆಗಳ ಕಾಲ ಸಂಪರ್ಕಕ್ಕೇ ಸಿಗದೇ ಇತ್ತು ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆಯೇ ಪಾಕಿಸ್ತಾನದಲಿ ಕೋಲಾಹಲ ಉಂಟಾಗಿದೆ. ಪಾಕಿಸ್ತಾನದ ಸರ್ಕಾರ ಸ್ಪಷ್ಟನೆ ನೀಡಿದ ಬಳಿಕವೂ ಪತ್ರಿಕೆಯ ಸಂಪಾದಕ ತನ್ನ ವಾದವನ್ನು ಮುಂದುವರೆಸಿದ್ದಾರೆ.
