ಬೆಂಗಳೂರು :  ಕೃಷಿ ಹಾಗೂ ನೀರಾವರಿ ಕ್ಷೇತ್ರದಲ್ಲಿ ಇಸ್ರೇಲ್‌ನ ತಂತ್ರಜ್ಞಾನ ಔನ್ನತ್ಯವನ್ನು ಕಣ್ಣಾರೆ ಕಂಡಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕರ್ನಾಟಕದಲ್ಲೂ ಅದರ ಅಳವಡಿಕೆಗೆ ಪ್ರೋತ್ಸಾಹ ನೀಡಿದ್ದಾರೆ. ಇಂತಹ ನಡೆಗಳು ಮುಂದಿನ ದಿನಗಳಲ್ಲಿ ಭಾರತ ಹಾಗೂ ಇಸ್ರೇಲ್‌ ಹಲವಾರು ಕ್ಷೇತ್ರಗಳಲ್ಲಿ ಒಟ್ಟಾಗಿ ಮುನ್ನಡೆಯಲು ದೊಡ್ಡ ಪ್ರೇರಣೆಯಾಗುತ್ತವೆ ಎಂದು ದಕ್ಷಿಣ ಭಾರತದಲ್ಲಿನ ಇಸ್ರೇಲ್‌ ದೂತಾವಾಸದ ಮುಖ್ಯಸ್ಥೆ ಡಾನಾ ಕುಷ್‌ರ್‍ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿ ಅವರು ಇಸ್ರೇಲ್‌ ಮಾದರಿ ಕೃಷಿ ಹಾಗೂ ಹನಿ ನೀರಾವರಿಗಾಗಿ ಬಜೆಟ್‌ನಲ್ಲಿ 450 ಕೋಟಿ ರು. ನೀಡಿದ್ದಾರೆ. ಈ ಬೆಳವಣಿಗೆ ಕರ್ನಾಟಕದಲ್ಲಿನ ಅವಕಾಶಗಳ ಬಗ್ಗೆ ಮುಕ್ತವಾಗಿ ತೆರೆದುಕೊಳ್ಳಲು ಇಸ್ರೇಲ್‌ನ ಕಂಪನಿಗಳಿಗೆ ಒತ್ತಾಸೆ ನೀಡಿದೆ. ರಾಜ್ಯವೊಂದರ ನಾಯಕತ್ವದ ಇಂತಹ ನಡೆಯು ಭಾರತದ ಹಾಗೂ ಇಸ್ರೇಲ್‌ನ ಭವಿಷ್ಯದ ಸವಾಲುಗಳನ್ನು ಎರಡೂ ದೇಶದ ಸರ್ಕಾರ, ಉದ್ಯಮ ಹಾಗೂ ಜನರು ಒಗ್ಗೂಡಿ ಎದುರಿಸಲು ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಸಂಪಾದಕೀಯ ವಿಭಾಗದ ಮುಖ್ಯಸ್ಥರೊಂದಿಗೆ ಶುಕ್ರವಾರ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಭಾರತ ಹಾಗೂ ಇಸ್ರೇಲ್‌ನ ನಡುವೆ ಕೃಷಿ ಹಾಗೂ ನೀರಾವರಿ ಕ್ಷೇತ್ರದಲ್ಲಿ ಈಗಾಗಲೇ ಅತ್ಯುತ್ತಮ ಸಹಕಾರ-ಸಂವಹನವಿದೆ. ಉಭಯ ದೇಶಗಳು ಭವಿಷ್ಯದ ಸವಾಲುಗಳನ್ನು ಒಗ್ಗೂಡಿ ಎದುರಿಸಲು ಕುಮಾರಸ್ವಾಮಿ ಕೈಗೊಂಡ ದೃಢ ರಾಜಕೀಯ ನಿರ್ಧಾರಗಳು ನೆರವಾಗುತ್ತವೆ ಎಂದರು.

ಭಾರತ ದೇಶದ ಸರ್ಕಾರಗಳೊಂದಿಗೆ ವ್ಯಾಪಾರ- ಒಡಂಬಡಿಕೆ ಮಾಡಿಕೊಳ್ಳುವುದು ಕಷ್ಟ. ಇಲ್ಲಿ ವಿಪರೀತ ವಿಳಂಬವಾಗುತ್ತದೆ ಎಂದೆಲ್ಲ ಬಿಂಬಿಸಲಾಗುತ್ತದೆ. ತಕ್ಕಮಟ್ಟಿಗೆ ಇದು ನಿಜ. ಆದರೆ, ರಾಜಕೀಯ ನಾಯಕತ್ವವು ಸದೃಢ ನಿರ್ಧಾರ ಕೈಗೊಂಡಾಗ ಭಾರತದಲ್ಲಿ ಇರುವ ವಿಪುಲ ಅವಕಾಶಗಳ ಬಗ್ಗೆ ಇಸ್ರೇಲ್‌ನ ಉದ್ಯಮಿಗಳಿಗೆ ಮನದಟ್ಟು ಮಾಡಿಕೊಡಲು ನಮ್ಮಂಥವರಿಗೆ (ಅಧಿಕಾರಿಗಳಿಗೆ) ಅನುಕೂಲವಾಗುತ್ತದೆ ಎಂದರು.

ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವುದಕ್ಕೆ ಒಂದು ವರ್ಷ ಮೊದಲು ಕುಮಾರಸ್ವಾಮಿ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದರು. ಈ ಭೇಟಿಯ ವೇಳೆ ಕೃಷಿ ಹಾಗೂ ನೀರಾವರಿ ಕ್ಷೇತ್ರಗಳಲ್ಲಿ ಇಸ್ರೇಲ್‌ನ ತಂತ್ರಜ್ಞಾನವನ್ನು ಕರ್ನಾಟಕದಲ್ಲೂ ಅಳವಡಿಸಿಕೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದ್ದರು. ತಾವು ಮುಖ್ಯಮಂತ್ರಿಯಾದ ನಂತರ ಮಂಡಿಸಿದ ಬಜೆಟ್‌ನಲ್ಲಿ ಈ ಉದ್ದೇಶಕ್ಕಾಗಿ ಹಣ ಮೀಸಲಿಟ್ಟರು ಎಂದು ಕುಷ್‌ರ್‍ ಹೇಳಿದರು.

ಇಸ್ರೇಲ್‌ನಲ್ಲಿ ಪ್ರತಿ ಮೂರು ವರ್ಷಕ್ಕೆ ಒಮ್ಮೆ ಜಾಗತಿಕ ಕೃಷಿ ಸಮಾವೇಶ ನಡೆಯುತ್ತದೆ. ಈ ಸಮಾವೇಶಕ್ಕೆ ಅತಿ ಹೆಚ್ಚು ಮಂದಿ ರಾಜಕೀಯ ನಾಯಕರು, ಅಧಿಕಾರಿಗಳು, ಉದ್ಯಮಿಗಳು ಹಾಗೂ ತಜ್ಞರು ಬರುತ್ತಾರೆ. ವಿಶೇಷವೆಂದರೆ, ಈ ಸಮಾವೇಶಕ್ಕೆ ಭಾರತೀಯ ನಿಯೋಗವು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಬರುತ್ತಿದೆ. ಮಹಾರಾಷ್ಟ್ರ, ಮಿಜೋರಾಂ, ಪಂಜಾಬ್‌ ಹಾಗೂ ಗುಜರಾತ್‌ನ ಮುಖ್ಯಮಂತ್ರಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.

ನಾಲ್ಕು ಕ್ಷೇತ್ರಗಳಲ್ಲಿ ಸಹಕಾರ:

ಭಾರತ ಅದರಲ್ಲೂ ವಿಶೇಷವಾಗಿ ಕರ್ನಾಟಕ ಹಾಗೂ ಇಸ್ರೇಲ್‌ ನಡುವೆ ಕೇವಲ ಕೃಷಿ, ನೀರಾವರಿ ಮಾತ್ರವಲ್ಲದೆ ಮಾಹಿತಿ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮದಂತಹ ಕ್ಷೇತ್ರಗಳಲ್ಲೂ ಉತ್ತಮ ಸಹಕಾರ ಮೂಡುವ ಸಾಧ್ಯತೆಯಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಅದರಲ್ಲೂ ವಿಶೇಷವಾಗಿ ಬೆಂಗಳೂರು ಹಾಗೂ ಇಸ್ರೇಲ್‌ನ ಟೆಲ್‌ ಅವಿವ್‌ ನಡುವೆ ಸಾಕಷ್ಟುಸಾಮ್ಯಗಳಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದ ವೇಳೆ ಎರಡು ದೇಶಗಳ ಕಂಪನಿಗಳು ಒಗ್ಗೂಡಿ ಸ್ಟಾರ್ಟ್‌ ಅಪ್‌ ಕ್ಷೇತ್ರದಲ್ಲೂ ಜಂಟಿಯಾಗಿ ಕೆಲಸ ಮಾಡಲು ಪ್ರೋತ್ಸಾಹ ನೀಡುವುದಕ್ಕೆ ಭಾರಿ ಮೊತ್ತದ ಹಣವನ್ನು ಮೀಸಲಿಟ್ಟಿದ್ದಾರೆ.

ಇನ್ನು ಪ್ರವಾಸೋದ್ಯಮ ಕ್ಷೇತ್ರವಂತೂ ಇತ್ತೀಚಿನ ವರ್ಷಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದು, ಕಳೆದ ಕೆಲವೇ ವರ್ಷಗಳಲ್ಲಿ ಭಾರತದಿಂದ ಇಸ್ರೇಲ್‌ಗೆ ಭೇಟಿ ನೀಡುವವರ ಸಂಖ್ಯೆ ಶೇ.54ರಷ್ಟುಹೆಚ್ಚಿದೆ. ಇಸ್ರೇಲ್‌ ಭೇಟಿಗೆ ಭಾರತೀಯರಿಗಾಗಿ ವೀಸಾ ನಿಯಮಗಳನ್ನು ಸರಳಗೊಳಿಸಲಾಗಿದೆ ಹಾಗೂ ವೀಸಾ ಶುಲ್ಕವನ್ನು ಸಹ ಕಡಿತಗೊಳಿಸಲಾಗಿದೆ. ಕೇವಲ 1600 ರು. ಮಾತ್ರ ವೀಸಾ ಶುಲ್ಕವಿದ್ದು, ವೀಸಾಗೆ ಅರ್ಜಿ ಸಲ್ಲಿಸಿದ 24 ರಿಂದ 72 ಗಂಟೆಗಳ ಒಳಗೆ ವೀಸಾ ಮಂಜೂರು ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದರು.

ಎಲ್ಲ ಸಮಸ್ಯೆಗೂ ಇಸ್ರೇಲ್‌ ಬಳಿ ಉತ್ತರವಿಲ್ಲ:

ಭಾರತದಂತಹ ಬೃಹತ್‌ ಗಾತ್ರದ ರಾಷ್ಟ್ರ ಕೃಷಿ ಹಾಗೂ ನೀರಾವರಿ ಕ್ಷೇತ್ರದಲ್ಲಿ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ತಂತ್ರಜ್ಞಾನ ಇಸ್ರೇಲ್‌ ಬಳಿ ಇಲ್ಲ. ಆದರೆ, ಈ ಎರಡು ಕ್ಷೇತ್ರದಲ್ಲಿ ಭಾರತೀಯ ಜ್ಞಾನ ಹಾಗೂ ಇಸ್ರೇಲ್‌ನ ತಂತ್ರಜ್ಞಾನ ಒಗ್ಗೂಡಿದರೆ ಹಾಗೂ ಎರಡು ದೇಶಗಳ ತಜ್ಞರ ನಡುವೆ ಕೊಡು-ಕೊಳ್ಳುವಿಕೆ ಸಾಧ್ಯವಾದರೆ ಇಬ್ಬರಿಗೂ ಹೆಚ್ಚು ಲಾಭವಾಗುತ್ತದೆ. ಭಾರತೀಯ ಬೆಳೆಗಳಿಗೆ ತಂತ್ರಜ್ಞಾನ ಒದಗಿಸುವ ಕೆಲಸವನ್ನು ಈಗಾಗಲೇ ಇಸ್ರೇಲ್‌ ಮಾಡುತ್ತಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಮಾವಿನ ಹಣ್ಣು. ಕರ್ನಾಟಕದಲ್ಲಿ ಅಲ್ಫಾನ್ಸೋ ಮಾವು ಜಾಗತಿಕ ಬ್ರಾಂಡ್‌ ಆಗಿದೆ. ಆದರೆ, ನಾನು ಇತ್ತೀಚೆಗೆ ಒಂದು ಮಾವು ಮೇಳದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿ ಇನ್ನೂ 13 ತಳಿಗಳ ಮಾವು ಸವಿದೆ. ಈ ಮಾವು ಬೆಳೆಯುವ ಸ್ಥಳೀಯ ಜ್ಞಾನ ಹಾಗೂ ಇಸ್ರೇಲ್‌ನ ತಂತ್ರಜ್ಞಾನ ಒಗ್ಗೂಡಬೇಕಿದೆ. ಇಸ್ರೇಲ್‌ನಲ್ಲಿ ಮಾವಿನ ಮರ ಎತ್ತರವಾಗಿ ಬೆಳೆಯದಂತೆ ತಡೆದು ಹೆಚ್ಚು ಇಳುವರಿ ನೀಡುವ ತಂತ್ರಜ್ಞಾನ ಯಶಸ್ವಿಯಾಗಿದೆ. ಹೀಗೆ ಭಾರತೀಯ ಮಾವಿನ ಜ್ಞಾನ ಹಾಗೂ ಇಸ್ರೇಲ್‌ನ ತಂತ್ರಜ್ಞಾನ ಸೇರಿದರೆ ಅದ್ಭುತಗಳನ್ನು ಸಾಧಿಸಬಹುದು ಎಂದರು.

ಈ ಉದ್ದೇಶದಿಂದಲೇ ಇಸ್ರೇಲ್‌ ದೇಶವು ಭಾರತದ 16 ರಾಜ್ಯಗಳಲ್ಲಿ ಸುಮಾರು 30 ಸೆಂಟರ್‌ ಫಾರ್‌ ಎಕ್ಸಲೆನ್ಸ್‌ಗಳನ್ನು ನಿರ್ಮಾಣ ಮಾಡಿದೆ. ಹರ್ಯಾಣದ ಚೆರಿ ಟೊಮೆಟೋ, ಬಾಗಲಕೋಟೆಯ ದಾಳಿಂಬೆ ಸೆಂಟರ್‌, ಕೋಲಾರದ ಮಾವು ಸೆಂಟರ್‌, ಧಾರವಾಡದ ತರಕಾರಿ ಸೆಂಟರ್‌, ತಮಿಳುನಾಡಿನಲ್ಲಿ ಹೂವುಗಳಿಗಾಗಿ ರೂಪಿಸಲಾಗಿರುವ ಸೆಂಟರ್‌ ಇವೆಲ್ಲವೂ ಭಾರತೀಯ ತಳಿಗಳ ಗುಣಮಟ್ಟಹಾಗೂ ಇಳುವರಿ ಹೆಚ್ಚಳಕ್ಕಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು.

ನೀರಾವರಿ ಸಹಕಾರ ಅತಿ ಮುಖ್ಯ:

ಇಸ್ರೇಲ್‌ನ ರಾಷ್ಟ್ರಪಿತ ಡೇವಿಡ್‌ ಬೆನ್‌ ಗೊರಿಯಾನ್‌ ಅವರು ಶೇ.60ರಷ್ಟುಮರುಭೂಮಿ ಹೊಂದಿರುವ ಇಸ್ರೇಲ್‌ ಅನ್ನು ಹಸಿರುಮಯ ಮಾಡುವುದಾಗಿ ಹೇಳಿದ್ದರು. ಅದರಂತೆ ಆವಿಷ್ಕಾರಗೊಂಡ ಹನಿ ನೀರಾವರಿ ತಂತ್ರಜ್ಞಾನ ದೇಶವನ್ನು ನಿಜಕ್ಕೂ ಹಸಿರು ಮಾಡಿದೆ. ಆದರೂ ಇಸ್ರೇಲ್‌ ನೀರಿನ ಸಮಸ್ಯೆ ಎದುರಿಸುತ್ತಿದೆ. ದೇಶದ ಶೇ.86ರಷ್ಟುನೀರು ಪುನರ್‌ ಬಳಕೆ ಮಾಡಲಾಗುತ್ತಿದೆ. ಭಾರತದಲ್ಲಿ ಸಾಕಷ್ಟುಜಲ ಸಂಪನ್ಮೂಲವಿದೆ. ಆದರೆ, ಅದರ ಬಳಕೆಗೆ ಬೇಕಾದ ತಂತ್ರಜ್ಞಾನದ ಕೊರತೆಯಿದೆ. ಈ ಕ್ಷೇತ್ರದಲ್ಲಿ ಎರಡೂ ದೇಶಗಳು ಪರಸ್ಪರ ಕೈಜೋಡಿಸಬಲ್ಲವು ಎಂದು ಅವರು ಹೇಳಿದರು.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ಬರುವ ವೇಳೆ ಯಾವ ಕ್ಷೇತ್ರಗಳಲ್ಲಿ ಸಹಕಾರ ಮೂಡಿಸಿದರೆ ಉಭಯ ದೇಶಗಳ ನಡುವಿನ ಸ್ನೇಹ ಮತ್ತಷ್ಟುವೃದ್ಧಿಸುತ್ತದೆ ಎಂದು ಇಸ್ರೇಲ್‌ನ ಅಧಿಕಾರಿಗಳು ಆಲೋಚಿಸಿದಾಗ ಹೊಳೆದದ್ದು ರಕ್ಷಣಾ ವಿಭಾಗ ಮತ್ತು ಜಲ ಸಂರಕ್ಷಣೆ. ಮೋದಿ ಅವರ ಭೇಟಿಯ ವೇಳೆ ಗಂಗಾ ಶುದ್ಧೀಕರಣ ಸೇರಿದಂತೆ ಹಲವು ಪ್ರಮುಖ ಜಲ ಸಂರಕ್ಷಣೆ ಒಪ್ಪಂದಗಳನ್ನು ಎರಡು ದೇಶಗಳು ಮಾಡಿಕೊಂಡವು. ಈಗಲೂ ಕೂಡ ಕೇರಳಕ್ಕೆ ಪ್ರವಾಹದ ವೇಳೆ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬಹುದಾದ ತಂತ್ರಜ್ಞಾನವನ್ನು ಇಸ್ರೇಲ್‌ ಕಂಪನಿಯೊಂದು ನೀಡುತ್ತಿದೆ. ಅಷ್ಟೇ ಏಕೆ, ಬೆಂಗಳೂರಿನಲ್ಲಿ ಸಾರ್ವಜನಿಕ ನೀರು ಪೂರೈಕೆ ವ್ಯವಸ್ಥೆಯಲ್ಲಿ ಸೋರಿಕೆ ತಡೆಗಟ್ಟುವ ಮೀಟರಿಂಗ್‌ ತಂತ್ರಜ್ಞಾನವನ್ನು ಇಸ್ರೇಲ್‌ ನೀಡುತ್ತಿದೆ ಎಂದು ಅವರು ಹೇಳಿದರು.

ಭಯೋತ್ಪಾದನೆ ತಡೆಗೆ ಮಾರ್ಗ:

ಭಾರತ ಹಾಗೂ ಇಸ್ರೇಲ್‌ ದೇಶಗಳು ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಪರಿಣತಿಯನ್ನು ಹೊಂದಿವೆ. ಈ ಪರಿಣತಿಯನ್ನು ಉಭಯ ದೇಶಗಳ ಜನರ ಸುರಕ್ಷತೆಗೆ ಎರಡೂ ದೇಶಗಳು ವಿನಿಮಯ ಮಾಡಿಕೊಳ್ಳಬೇಕು. ಆ ಕಾರ್ಯವನ್ನು ಈಗಾಗಲೇ ಎರಡೂ ದೇಶಗಳ ಸರ್ಕಾರಗಳು ಮಾಡುತ್ತಿವೆ. ಮುಂಬೈ ದಾಳಿ ವೇಳೆ ತಾಜ್‌ ಹೋಟೆಲ್‌ನಲ್ಲಿ ಸಿಲುಕಿದ್ದ ಇಸ್ರೇಲ್‌ನ ಬಾಲಕನೊಬ್ಬನನ್ನು ಭಾರತೀಯ ದಾದಿಯೊಬ್ಬರು ರಕ್ಷಿಸಿದ್ದರು. ಇಸ್ರೇಲ್‌ನ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದಾಗ ಈ ದಾದಿಯನ್ನು ನೇರಾನೇರ ಭೇಟಿಯಾಗಿ ಕೃತಜ್ಞತೆ ಅರ್ಪಿಸಿದ್ದರು. ಹೀಗೆ ಇಸ್ರೇಲ್‌ ಹಾಗೂ ಭಾರತೀಯ ಸಾರ್ವಜನಿಕರ ನಡುವೆ ಸಂಬಂಧ ವೃದ್ಧಿಯಾಗಬೇಕು ಎಂದು ಅವರು ಹೇಳಿದರು.

ಸಂವಾದದಲ್ಲಿ ದಕ್ಷಿಣ ಭಾರತದಲ್ಲಿನ ಇಸ್ರೇಲ್‌ ದೂತಾವಾಸದ ಉಪಮುಖ್ಯಸ್ಥ ಏರಿಯಲ್‌ ಸೀಡ್‌ಮನ್‌ ಪಾಲ್ಗೊಂಡಿದ್ದರು. ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಹಾಗೂ ಸುವರ್ಣ ನ್ಯೂಸ್.ಕಾಂ ಮುಖ್ಯ ಸಂಪಾದಕರಾದ ಎಸ್.ಕೆ. ಶಾಮಸುಂದರ್  ಅವರು ಕರ್ನಾಟಕದ ಮಾಧ್ಯಮ ಲೋಕದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಡಾನಾ ಕುಷ್‌ರ್ ಹಾಗೂ ಸೀಡ್‌ಮನ್‌ ಅವರಿಗೆ ಮಾಹಿತಿ ನೀಡಿದರು.