ಹಡೆರಾ(ಅ.07): ಇತಿಹಾಸವೇ ಹಾಗೆ. ತನ್ನೊಡಲಲ್ಲಿ ಅದೆಷ್ಟೋ ರೋಚಕ ಸಂಗತಿಗಳನ್ನು ಬಚ್ಚಿಟ್ಟುಕೊಂಡಿರುತ್ತದೆ. ಬುದ್ಧಿವಂತ ಮಾನವ ಅದನ್ನು ಬಗೆದು ತಿಳಿಯುತ್ತಾನೆ. ಬಗೆದಷ್ಟು ಚಿತ್ರ ವಿಚಿತ್ರ ಸತ್ಯಗಳು ಭೂಮಿಯ ಒಡಲಾಳದಿಂದ ಹೊರ ಬರುತ್ತಲೇ ಇರುತ್ತವೆ.

ಅದರಂತೆ ಇಸ್ರೇಲ್‌ನ ಎನ್ ಎಸುರು ಪ್ರದೇಶದಲ್ಲಿ ಸುಮಾರು ಐದು ಸಾವರಿ ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಸುಸಜ್ಜಿತ ನಗರವೊಂದನ್ನು ಪುರಾತತ್ವ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ.

ಮೆಡಿಟರೇನಿಯನ್ ಪ್ರದೇಶದಲ್ಲಿ ಐದು ಸಾವಿರ ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಸುಸಜ್ಜಿತ ನಗರ ಉತ್ಖನನದ ಸಮಯದಲ್ಲಿ ದೊರೆತಿದ್ದು, ಇಡೀ ನಗರವನ್ನು ಚೌಕಾಕಾರದಲ್ಲಿ ನಿರ್ಮಾಣ ಮಾಡಲಾಗಿದೆ.

ಸಿಂಧೂ ನಾಗರಿಕತೆಯ ನಗರಗಳಂತೇ ಇಡೀ ನಗರವನ್ನು ಚೌಕಾಕಾರದಲ್ಲಿ ವಿಂಗಡಿಸಿ ಉತ್ತಮ ಬೀದಿಗಳ ನಿರ್ಮಾಣ ಮಾಡಲಾಗಿದೆ ಎಂದು ಪುರಾತತ್ವ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಒಟ್ಟು 0.65 ಕಿ.ಮೀ ವ್ಯಾಪ್ತಿಯಲ್ಲಿ ನಗರ ನಿರ್ಮಾಣ ಮಾಡಲಾಗಿದ್ದು, ನಗರದ ಹೊರಗಡೆ ವಿಸ್ತಾರವಾದ ಸ್ಮಶಾನ ಕೂಡ ನಿರ್ಮಾಣ ಮಾಡಿದ್ದರು ಕುರುಹು ದೊರೆತಿದೆ ಎನ್ನಲಾಗಿದೆ.

ಕಂಚಿನ ಯುಗಕ್ಕೆ ಸೇರಿದ ಈ ನಗರವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ಮಿಸಲಾಗಿದ್ದು, ಧಾರ್ಮಿಕ ಕಾರ್ಯಗಳಿಗಾಗಿ ಕಟ್ಟಿದ ದೇವಾಲಯಗಳನ್ನು ಕಾಣಬಹುದಾಗಿದೆ. ದೇವಾಲಯಗಳ ಸುತ್ತಮುತ್ತ ಮನುಷ್ಯ ಮತ್ತು ವಿವಿಧ ಪ್ರಾಣಿಗಳ ಮೂರ್ತಿಗಳು ದೊರೆತಿವೆ.