ಸಾರ್ವಭೌಮ ಸಮಾನತೆ ಆಧಾರದಲ್ಲಿ ಎಲ್ಲಾ ನೆರೆಯ ದೇಶಗಳೊಂದಿಗೆ ಪಾಕಿಸ್ತಾನವು ಉತ್ತಮ ಹಾಗೂ ರಚನಾತ್ಮ ಸಂಬಂಧಗಳನ್ನು ಬಯಸುತ್ತದೆ ಎಂದು ಪಾಕಿಸ್ತಾನ ನೂತನ ಪ್ರಧಾನಿ ಶಾಹಿದ ಖಾಕನ್ ಅಬ್ಬಾಸಿ ಹೇಳಿದ್ದಾರೆ.

ಇಸ್ಲಾಮಾಬಾದ್: ಸಾರ್ವಭೌಮ ಸಮಾನತೆ ಆಧಾರದಲ್ಲಿ ಎಲ್ಲಾ ನೆರೆಯ ದೇಶಗಳೊಂದಿಗೆ ಪಾಕಿಸ್ತಾನವು ಉತ್ತಮ ಹಾಗೂ ರಚನಾತ್ಮ ಸಂಬಂಧಗಳನ್ನು ಬಯಸುತ್ತದೆ ಎಂದು ಪಾಕಿಸ್ತಾನ ನೂತನ ಪ್ರಧಾನಿ ಶಾಹಿದ ಖಾಕನ್ ಅಬ್ಬಾಸಿ ಹೇಳಿದ್ದಾರೆ.

ಪಾಕಿಸ್ತಾನದ 70ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೇಶದ ಜನತೆಯನ್ನುದ್ದೇಶಿ ಮಾತನಾಡಿದ ಖಾಕನ್, ಪಾಕಿಸ್ತಾನವು ಜಗತ್ತಿನ ಎಲ್ಲಾ ದೇಶಗಳೊಂದಿಗೆ, ವಿಶೇಷವಾಗಿ ನೆರೆಯ ದೇಶಗಳೊಂದಿಗೆ ಸಾರ್ವಭೌಮ ಸಮಾನತೆಯಾಧಾರದಲ್ಲಿ ಉತ್ತಮ ಹಾಗೂ ರಚನಾತ್ಮಕ ಬಾಂಧವ್ಯವನ್ನು ಬಯಸುತ್ತದೆ, ಎಂದು ಹೇಳಿದ್ದಾರೆ.

ದಕ್ಷಿಣ ಏಷ್ಯಾ ಜನರು ಕಳೆದ ಐವತ್ತು ವರ್ಷಗಳಲ್ಲಿ ಸಂಘರ್ಷಮಯ ಪರಿಸ್ಥಿತಿಗಳಲ್ಲಿ ಬಹಳ ಯಾತನೆಯನ್ನು ಅನುಭವಿಸಿದ್ದಾರೆ. ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಯಬೇಕು, ಇಲ್ಲದಿದ್ದಲ್ಲಿ ಸಮೃದ್ಧಿ ಹಾಗೂ ಪ್ರಗತಿ ಕಾಣಲು ಸಾಧ್ಯವಿಲ್ಲ, ಎಂದು ಖಾಕನ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಭಯೋತ್ಪಾದನೆ, ಕದನ ವಿರಾಮ ಉಲ್ಲಂಘನೆ ಹಾಗೂ ಉಗ್ರರ ನುಸುಳುವಿಕೆಯ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಬಂಧ ಹದೆಗೆಡುತ್ತಿದ್ದು, ಖಾಕನ್ ಹೇಳಿಕೆಯು ಮಹತ್ವ ಪಡೆದಿದೆ.

ಉರಿಯಲ್ಲಿ ಸೇನಾ ಶಿಬಿರದ ಮೇಲೆ ಹಾಗೂ ಪಠಾಣ್ ಕೋಠ್ ವಾಯುನೆಲೆ ಮೇಲೆ ಉಗ್ರರ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ಸಂಬಂಧಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ.

ಭಯೋತ್ಪಾದನೆಯು 21ನೇ ಶತಮಾನದ ಬಹಳ ದೊಡ್ಡ ಸವಾಲು ಎಂದಿರುವ ಖಾಕನ್, ಭಯೋತ್ಪಾದನೆ ವಿರುದ್ಧ ಹೋರಾಡಲು ಜಾಗತಿಕ ಸಮುದಾಯ ಪಾಕಿಸ್ತಾನವನ್ನು ಬೆಂಬಲಿಸಬೇಕು ಎಂದು ಈ ಸಂದರ್ಭದಲ್ಲಿ ಕರೆ ನೀಡಿದ್ದಾರೆ.