ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಡಿಜಿಟಲ್ ಇಂಡಿಯಾ ಹೊಸದೊಂದು ವೆಬ್‌ಸೈಟ್ ಆರಂಭಿಸಿದ್ದು, ಟಿಕೆಟ್ ಬುಕ್ಕಿಂಗ್, ರೀಚಾರ್ಜ್ ಮುಂತಾದ ಕಾರ್ಯಗಳನ್ನು ಆನ್‌ಲೈನ್ ಮೂಲಕವೇ ಮಾಡಬಹುದೆಂಬ ಸುದ್ದಿಯೊಂದು ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆ ಏನು? ಇದು ವೈರಲ್ ಚೆಕ್...

ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯನ್ನು ಪ್ರೋತ್ಸಾಹಿಸಲು www.egramdigital.co.in ಎಂಬ ಹೆಸರಿನ ವೆಬ್‌ಸೈಟ್‌ವೊಂದು ಪ್ರಾರಂಭವಾಗಿದ್ದು, ಟಿಕೆಟ್ ಬುಕ್ಕಿಂಗ್, ರೀಚಾರ್ಜ್ ಸೇರಿದಂತೆ ಎಲ್ಲಾ ಕಾರ್ಯಗಳನ್ನು ಆನ್‌ಲೈನ್ ಮುಖಾಂತರ ಮಾಡಿಕೊಡಲಿದೆ ಎಂದು ಹೇಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸಂದೇಶ ವೈರಲ್ ಆಗಿದೆ. 

ಡಿಜಿಟಲ್ ಇಂಡಿಯಾದ ಲೋಗೋವನ್ನು ಬಳಸಿಕೊಂಡು, ಪ್ರಧಾನಿ ನರೇಂದ್ರ ಮೋದಿ ಅವರ ಧ್ವನಿ ಸಂದೇಶವನ್ನೂ ಅಪ್‌ಲೋಡ್ ಮಾಡಲಾಗಿದೆ. ಅಲ್ಲದೆ ವಿದೇಶದ ದೂರವಾಣಿ ಸಂಖ್ಯೆಯನ್ನು ವೆಬ್‌ಸೈಟ್ ಕೆಳಗೆ ನೀಡಲಾಗಿದೆ. ಸರ್ಕಾರದ ಇತರೆ ಇಲಾಖೆಗಳ ಹೈಪರ್‌ಲಿಂಕ್‌ಗಳನ್ನೂ ನೀಡಲಾಗಿದೆ. ಅಲ್ಲದೆ ವೆಬ್‌ಸೈಟ್ ಮೂಲಕವಾಗಿ, ಹಣ ವರ್ಗಾವಣೆ, ಡಿಟಿಎಚ್/ ಮೊಬೈಲ್ ರೀಚಾರ್ಜ್, ಬಸ್ ಮತ್ತು ರೈಲು, ಸಿನಿಮಾ, ಹೋಟೆಲ್ ಟಿಕೆಟ್ ಬುಕ್ಕಿಂಗ್ ಸೇವೆಯನ್ನು ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ಈ ವೆಬ್‌ಸೈಟ್ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಸೇವೆ ಸಲ್ಲಿಸಲಿದೆ ಎಂದು ಹೇಳಲಾಗಿದೆ. ಆದರೆ ನಿಜಕ್ಕೂ ಡಿಜಿಟಲ್ ಇಂಡಿಯಾ ಭಾಗವಾಗಿ ಸರ್ಕಾರ ಇಂಥದ್ದೊಂದು ವೆಬ್‌ಸೈಟ್ ಪ್ರಾರಂಭಿಸಿದ್ದು ನಿಜವೇ ಎಂದು ಹುಡಕಹೊರಟಾಗ ಇದೊಂದು ನಕಲಿ ವೆಬ್‌ಸೈಟ್ ಎಂಬುದು ಪತ್ತೆಯಾಗಿದೆ. ವಾಸ್ತವವಾಗಿ ಇದು ಭಾರತ ಸರ್ಕ್ರಾದ ‘ಡಿಜಿಟಲ್ ಇಂಡಿಯಾ’ದ ಅಧಿಕೃತ ವೆಬ್‌ಸೈಟ್ ಅಲ್ಲ. ಸದ್ಯ ಈ ನಕಲಿ ವೆಬ್‌ಸೈಟ್ 11 ಕೋಟಿ ವಂಚಿಸಿದೆ. ಉತ್ತರಪ್ರದೇಶದ ವಿಶೇಷ ತನಿಖಾ ದಳವು ಹೀಗೆ ನಕಲಿ ವೆಬ್‌ಸೈಟ್ ಪ್ರಾರಂಭಿಸಿ ವಂಚಿಸುತ್ತಿದ್ದ ಗ್ಯಾಂಗನ್ನು ಬಂಧಿಸಿದೆ.

ತನಿಖೆ ವೇಳೆ ಈ ಗ್ಯಾಂಗ್ ನಕಲಿ ವೆಬ್‌ಸೈಟ್ ಸ್ಥಾಪಿಸಿ ತಮ್ಮ ಗುರುತು ಸಿಗದಂತೆ ನಕಲಿ ವಿಳಾಸ, ಮೊಬೈಲ್ ನಂಬರ್ ನೀಡಿರುವುದು ಪತ್ತೆಯಾಗಿದೆ. ಈ ರೀತಿಯ ನಕಲಿ ವೆಬ್‌ಸೈಟ್‌ಗಳಿಗೆ ಮಾರುಹೋಗದಂತೆ ಉತ್ತರಪ್ರದೇಶ ಪೊಲೀಸರು ಎಚ್ಚರಿಸಿದ್ದಾರೆ.