ಪಟನಾ[ಜು.16]: ಸಾಂವಿಧಾನಿಕ ರಾಜ್ಯಪಾಲರ ಹುದ್ದೆ ಕುರಿತು ಅವಹೇಳನಕಾರಿಯಾದ ಪ್ರಶ್ನೆಯೊಂದನ್ನು ಕೇಳುವ ಮೂಲಕ ಬಿಹಾರ ಲೋಕ ಸೇವಾ ಆಯೋಗ(ಬಿಪಿಎಸ್‌ಸಿ) ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

ಬಿಹಾರದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಬಿಹಾರ ಲೋಕಸೇವಾ ಆಯೋಗ ಭಾನುವಾರ ಪರೀಕ್ಷೆ ನಡೆಸಿತ್ತು. ಭಾರತದ ರಾಜ್ಯಗಳಲ್ಲಿ ಅದರಲ್ಲೂ ಪ್ರಮುಖವಾಗಿ ಬಿಹಾರದಲ್ಲಿ ರಾಜ್ಯಪಾಲರ ಕರ್ತವ್ಯವನ್ನು ವಿವರಿಸಿ. ಜೊತೆಗೆ ರಾಜ್ಯಪಾಲರು ಕೇವಲ ಕೈಗೊಂಬೆಯೇ ಎಂಬುದನ್ನು ವಿವರಿಸಿ ಎಂಬ ಪ್ರಶ್ನೆಯೊಂದನ್ನು ಬಿಹಾರ ಲೋಕ ಸೇವಾ ಆಯೋಗದ ಸಾಮಾನ್ಯ ಜ್ಞಾನದ ಎರಡನೇ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿತ್ತು. ಈ ವಿಷಯದ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಿಹಾರದ ಪ್ರತಿಪಕ್ಷವಾದ ಲಾಲು ಪ್ರಸಾದ್‌ ನೇತೃತ್ವದ ಆರ್‌ಜೆಡಿ, ‘’ರಾಜ್ಯಪಾಲರ ಗೌರವಕ್ಕೆ ಧಕ್ಕೆಯನ್ನುಂಟು ಮಾಡಲು ಈ ಪ್ರಶ್ನೆ ಕೇಳಲಾಗಿದೆ. ಇಂಥ ಪ್ರಶ್ನೆಯನ್ನು ಆಯ್ಕೆ ಮಾಡಿದವರನ್ನು ಗುರುತಿಸಬೇಕು. ಅಲ್ಲದೆ, ಅವರನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದೆ.

ಇನ್ನು ಈ ಕುರಿತು ಸ್ಪಷ್ಟನೆ ನೀಡಿದ ಬಿಹಾರ ಶಿಕ್ಷಣ ಸಚಿವ ಕೃಷ್ಣ ನಂದನ್‌ ಪ್ರಸಾದ್‌ ವರ್ಮಾ, ಬಿಹಾರ ಲೋಕ ಸೇವಾ ಆಯೋಗದ ಪ್ರಶ್ನೆ ಪತ್ರಿಕೆಯಲ್ಲಿ ಇಂಥ ಪ್ರಶ್ನೆ ಕೇಳಿರುವುದು ಆಘಾತಕಾರಿ. ಈ ಬಗ್ಗೆ ಎಲ್ಲ ಮಾಹಿತಿ ಪಡೆದು, ಪ್ರತಿಕ್ರಿಯಿಸುತ್ತೇನೆ ಎಂದಿದ್ದಾರೆ.