'ಬೆಂಗಳೂರು ಪೊಲೀಸರು ವಿಶೇಷವಾಗಿ ಮಹಿಳೆಯರಿಗೇ ಮೀಸಲಿರುವ ಸೇವೆಯೊಂದನ್ನು ಆರಂಭಿಸಿದ್ದು, ಟ್ಯಾಕ್ಸಿ ಹಾಗೂ ಆಟೋ ಹತ್ತುವ ಮುನ್ನ ಆ ವಾಹನದ ನಂಬರ್ ಅನ್ನು ಎಸ್‌ಎಂಎಸ್ ಮಾಡಿದರೆ, ಜಿಪಿಆರ್‌ಎಸ್ ಮೂಲಕ ಪೊಲೀಸರು ಟ್ರ್ಯಾಕ್ ಮಾಡುತ್ತಾರೆ,' ಎಂಬ ಸಂದೇಶವೊಂದು ಸಾಮಾಜಿಕ ಜಾಲಾತಣದಲ್ಲಿ ಹರಿದಾಡುತ್ತಿದ್ದು, ಈ ಸಂದೇಶದ ಬಗ್ಗೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: ನಗರ ಪೊಲೀಸರು ಮಹಿಳಾ ಸುರಕ್ಷತೆಗಾಗಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ. ಪಿಂಕ್ ಹೊಯ್ಸಳ ಆರಂಭಿಸಿ, ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಗಟ್ಟುವಲ್ಲಿ ಮುಂದಾಗಿದ್ದಾರೆ. ಆದರೆ, ವಾಟ್ಸ್ ಆ್ಯಪ್ ಸೇರಿ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿದ್ದು, 'ಬೆಂಗಳೂರು ಪೊಲೀಸರು ಮಹಿಳೆಯರಿಗಾಗಿಯೇ ವಿಶೇಷ ಸೇವೆಯೊಂದನ್ನು ಮೀಸಲಿಡಲಾಗಿದೆ,' ಎನ್ನಲಾಗುತ್ತಿದೆ.
ಆದರಿದು ಫೇಕ್, ಎಂದು ಬೆಂಗಳೂರು ನಗರ ಪೊಲೀಸರು ತಮ್ಮ ಅಧಿಕೃತ ಟ್ವೀಟ್ ಅಕೌಂಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
'ಬೆಂಗಳೂರು ನಗರ ಪೊಲೀಸರು ಮಹಿಳೆಯರಿಗಾಗಿಯೇ ಮೀಸಲಿರುವ ಸೇವೆಯೊಂದನ್ನು ಆರಂಭಿಸಿದೆ. ಟ್ಯಾಕ್ಸ್ ಅಥವಾ ಆಟೋ ಹತ್ತುವ ಮುನ್ನ +919969777888 ಗೆ ವಾಹನದ ನಂಬರ್ ಅನ್ನು ಎಸ್‌ಎಂಎಸ್ ಮಾಡಿ. ತಕ್ಷಣ ಎಸ್‌ಎಂಎಸ್ ಮೂಲಕವೇ ಅಂಗೀಕೃತವಾಗಿರುವ ಪ್ರತಿಕ್ರಿಯೆ ಬರುತ್ತದೆ. ಆ ವಾಹನವನ್ನು ಜಿಪಿಆರ್‌ಎಸ್ ಮೂಲಕ ಪೊಲೀಸರು ಟ್ರ್ಯಾಕ್ ಮಾಡುತ್ತಾರೆ. ಈ ಸಂದೇಶವನ್ನು ಸಾಧ್ಯವಾದಷ್ಟು ಮಂದಿಯೊಂದಿಗೆ ಶೇರ್ ಮಾಡಿಕೊಳ್ಳಿ. ನಿಮ್ಮ ಸಹೋದರಿ, ತಾಯಂದಿರು, ಪತ್ನಿ ಹಾಗೂ ಮಹಿಳಾ ಸ್ನೇಹಿತರಿಗೆ ಸಹಕರಿಸಿ...' ಎಂಬೊಂದು ಸಂದೇಶ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಶೇರ್ ಆಗುತ್ತಿದ್ದು, ವೈರಲ್ ಆಗಿದೆ. ಈ ಸಂದೇಶಕ್ಕೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
