ಸರಣಿಯಾಗಿ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುತ್ತಿರುವ ಉತ್ತರ ಕೊರಿಯಾವನ್ನು ಮಟ್ಟ ಹಾಕುವುದು ಹೇಗೆ ಎಂದು ತಲೆಕೆಡಿಸಿಕೊಂಡು ಕೂತಿರುವಾಗಲೇ, ಇರಾನ್ ಕೂಡ ತನ್ನ ಸೂಚನೆ ಧಿಕ್ಕರಿಸಿ ಕ್ಷಿಪಣಿಯೊಂದನ್ನು ಪರೀಕ್ಷೆ ನಡೆಸಿರುವುದು ‘ವಿಶ್ವದ ದೊಡ್ಡಣ್ಣ’ ಅಮೆರಿಕದ ತಲೆಬಿಸಿಗೆ ಕಾರಣವಾಗಿದೆ.
ಟೆಹರಾನ್: ಸರಣಿಯಾಗಿ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುತ್ತಿರುವ ಉತ್ತರ ಕೊರಿಯಾವನ್ನು ಮಟ್ಟ ಹಾಕುವುದು ಹೇಗೆ ಎಂದು ತಲೆಕೆಡಿಸಿಕೊಂಡು ಕೂತಿರುವಾಗಲೇ, ಇರಾನ್ ಕೂಡ ತನ್ನ ಸೂಚನೆ ಧಿಕ್ಕರಿಸಿ ಕ್ಷಿಪಣಿಯೊಂದನ್ನು ಪರೀಕ್ಷೆ ನಡೆಸಿರುವುದು ‘ವಿಶ್ವದ ದೊಡ್ಡಣ್ಣ’ ಅಮೆರಿಕದ ತಲೆಬಿಸಿಗೆ ಕಾರಣವಾಗಿದೆ.
ಅಮೆರಿಕದ ಸ್ಪಷ್ಟ ನಿರ್ದೇಶನದ ಹೊರತಾಗಿಯೂ ಮಧ್ಯಮ ದೂರ ಕ್ರಮಿಸಬಲ್ಲ ಕ್ಷಿಪಣಿಯೊಂದನ್ನು ಇರಾನ್ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ.
‘ಖೋರಮ್‌ಶಹರ್’ ಎಂಬ ಈ ಕ್ಷಿಪಣಿ ಉಡಾವಣೆಯ ದೃಶ್ಯಗಳು ಹಾಗೂ ಕ್ಷಿಪಣಿಯ ಮೂತಿಯಿಂದ ಸೆರೆ ಹಿಡಿಯಲಾದ ವಿಡಿಯೋಗಳನ್ನು ಇರಾನ್ ಸರ್ಕಾರಿ ಸ್ವಾಮ್ಯದ ಟೀವಿ ವಾಹಿನಿ ಶನಿವಾರ ಬಿತ್ತರಿಸಿದೆ.
ಆದರೆ ಈ ಪರೀಕ್ಷೆ ಯಾವಾಗ ನಡೆದಿದೆ ಎಂಬುದು ಗೊತ್ತಾಗಿಲ್ಲ. ಖೋರಮ್ ಶಹರ್ ಕ್ಷಿಪಣಿಯನ್ನು ಶುಕ್ರವಾರ ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ನಡೆದ ಸೇನಾ ಪೆರೇಡ್‌ನಲ್ಲಿ ಪ್ರದರ್ಶಿಸಲಾಗಿತ್ತು. ಶೀಘ್ರದಲ್ಲೇ ಇದರ ಪರೀಕ್ಷೆ ನಡೆಯಲಿದೆ ಎಂದು ಇರಾನ್ ತಿಳಿಸಿತ್ತು. ಹೀಗಾಗಿ ಶನಿವಾರವೇ ಕ್ಷಿಪಣಿ ಪರೀಕ್ಷೆ ನಡೆದಿರಬಹುದು ಎಂದು ಹೇಳಲಾಗಿದೆ.
ತನ್ನ ಸೂಚನೆಯನ್ನು ಧಿಕ್ಕರಿಸಿ ಇರಾನ್ ಕ್ಷಿಪಣಿ ಪರೀಕ್ಷೆ ನಡೆಸಿರುವ ಹಿನ್ನೆಲೆಯಲ್ಲಿ ಆ ದೇಶದ ಮೇಲೆ ಅಮೆರಿಕ ಹೊಸದಾಗಿ ದಿಗ್ಬಂಧನಗಳನ್ನು ಹೇರುವ ಸಂಭವವಿದೆ. ಹೀಗಾದಲ್ಲಿ ಇರಾನ್- ಅಮೆರಿಕ ನಡುವಣ ಸಂಬಂಧ ಮತ್ತೆ ಹಳಸಲಿದೆ.
ಸಂಬಂಧ ಸುಧಾರಣೆಗಾಗಿ 2015ರಲ್ಲಿ ಮಾಡಿಕೊಳ್ಳಲಾಗಿದ್ದ ಐತಿಹಾಸಿಕ ಅಣು ಒಪ್ಪಂದ ಕೂಡ ರದ್ದಾಗುವ ಸಂಭವವಿದ್ದು, ಅದನ್ನು ರದ್ದುಗೊಳಿಸಲು ಸಿದ್ಧವಿರುವುದಾಗಿ ಅಮೆರಿಕ ಘೋಷಿಸಿದೆ.
