ಚೆನ್ನೈ[ಜೂ.24]: ಭ್ರಷ್ಟಾಚಾರದ ಆರೋಪದ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನೇ ಬಂಧಿಸಿದ್ದ ತಮಿಳುನಾಡು ಮೂಲದ ಮಾಜಿ ಡಿಜಿಪಿ ವಿ.ಆರ್‌. ಲಕ್ಷ್ಮೀನಾರಾಯಣನ್‌ ಅವರು ಭಾನುವಾರ ಕೊನೆಯುಸಿರೆಳೆದಿದ್ದಾರೆ.

ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮೀನಾರಾಯಣನ್‌ (91) ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 1951ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿದ್ದ ಲಕ್ಷ್ಮೀನಾರಾಯಣನ್‌ ಅವರನ್ನು ಎಲ್ಲರೂ ಪ್ರೀತಿಯಿಂದ ವಿಆರ್‌ಎಲ್‌ ಎಂದೇ ಕರೆಯುತ್ತಿದ್ದರು. ಮದುರೈನ ಸಹಾಯಕ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡ ಲಕ್ಷ್ಮೀನಾರಾಯಣನ್‌ ಬಳಿಕ ಸಿಬಿಐನ ಜಂಟಿ ನಿರ್ದೇಶಕರಾಗಿದ್ದರು. ಇದೇ ಅವಧಿಯಲ್ಲಿ ಅಂದರೆ 1977ರಲ್ಲಿ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಇಂದಿರಾ ಅವರನ್ನು ಬಂಧಿಸುವಂತೆ ಕೋರ್ಟ್‌ ಆದೇಶಿಸಿತ್ತು.

ಅದರನ್ವಯ ಇಂದಿರಾರನ್ನು ಲಕ್ಷ್ಮೀನಾರಾಯಣನ್‌ ಅವರು ಬಂಧಿಸಿದ್ದರು. ಲಕ್ಷ್ಮೀನಾರಾಯಣನ್‌ ಅವರು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರಷ್ಟೇ ಅಲ್ಲದೆ, ಇಂದಿರಾಗಾಂಧಿ, ಚರಣ್‌ ಸಿಂಗ್‌ ಹಾಗೂ ಮೊರಾರ್ಜಿ ಅವರ ಆಡಳಿತಾವಧಿಯಲ್ಲೂ ಕಾರ್ಯ ನಿರ್ವಹಿಸಿದ್ದರು.