ಬೆಂಗಳೂರು [ಆ.27]:  ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಐಪಿಎಸ್‌ ಅಧಿಕಾರಿ ಆರ್‌.ರಮೇಶ್‌ (54) ಅವರು ಸೋಮವಾರ ಕೆಂಗೇರಿಯ ಬಿಜಿಎಸ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಪ್ರಸ್ತುತ ರಮೇಶ್‌ ಅವರು ಯೋಜನೆ ಮತ್ತು ಆಧುನೀಕರಣ ವಿಭಾಗದ ಡಿಐಜಿ ಆಗಿದ್ದರು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. 

2000ರಲ್ಲಿ ಕರ್ನಾಟಕ ಪೊಲೀಸ್‌ ಸೇವೆಗೆ ಸೇರಿದ್ದ ರಮೇಶ್‌ ಅವರು ಕಾರ್ಕಳ, ಸಾಗರ, ಚಿಂತಾಮಣಿ ಹಾಗೂ ಹೊಳೆನರಸೀಪುರ ಉಪ ವಿಭಾಗಗಳಲ್ಲಿ ಡಿವೈಎಸ್ಪಿ ಆಗಿ ನಂತರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುವರಿ ಎಸ್ಪಿ ಆಗಿ ಕಾರ್ಯನಿರ್ವಹಿಸಿದ್ದರು. 

ಭಾರತೀಯ ಪೊಲೀಸ್‌ ಸೇವೆಗೆ (ಐಪಿಎಸ್‌) ಬಡ್ತಿ ಹೊಂದಿ ಉತ್ತರ ಕನ್ನಡ ಜಿಲ್ಲೆ, ಬೆಂಗಳೂರು ಗುಪ್ತದಳ ಹಾಗೂ ಇತರ ವಿಭಾಗಗಳಲ್ಲಿ ಎಸ್ಪಿಯಾಗಿ ಕೆಲಸ ಮಾಡಿದ್ದರು. ಬೆಂಗಳೂರು ಅಪರಾಧ ವಿಭಾಗದ ಡಿಸಿಪಿ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಐಜಿ ಆಗಿಯೂ ಕೆಲಸ ಮಾಡಿದ್ದರು. ದಾಬಸ್‌ಪೇಟೆ ಸಮೀಪದ ಮೈಲನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.