ಬೆಂಗಳೂರು :  ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಶುಕ್ರವಾರ 300ಕ್ಕೂ ಹೆಚ್ಚು ರೌಡಿಗಳ ಪರೇಡ್‌ ನಡೆಸಿ ಎಚ್ಚರಿಕೆ ನೀಡಿದರು.

ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕೇಂದ್ರ ಕಚೇರಿಯಲ್ಲಿ ಹೆಚ್ಚುವರಿ ಪೊಲೀಸ್‌ ಆಯುಕ್ತ ರೌಡಿಗಳಿಗೆ ಚುಣಾವಣೆಯಲ್ಲಿ ಏನಾದರೂ ಬಾಲಬಿಚ್ಚಿದರೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ರೌಡಿ ಪರೇಡ್‌ನಲ್ಲಿ ಸೈಲೆಂಟ್‌ ಸುನೀಲ, ಶಿವಾಜಿನಗರದ ತನ್ವೀರ್‌, ಮಾರೇನಹಳ್ಳಿ ಜಗ್ಗ, ಕುಣಿಗಲ್‌ ಗಿರಿ ಸೇರಿ 300ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ಒಬ್ಬೊಬ್ಬರಿಗೆ ಅಲೋಕ್‌ ಬುದ್ಧಿ ಹೇಳುವಾಗ ರೌಡಿ ಸೈಲೆಂಟ್‌ ಸುನೀಲ್‌ನ ಬಳಿ ಬಂದಾಗ ಗರಂ ಆದರು. ‘ಏ ಏನೋ ಗುರಾಯಿಸುತ್ತೀಯಾ. ಎಷ್ಟುಸೊಕ್ಕು ನಿಂಗೆ. ಕಣ್ಣು ಗುಡ್ಡೆ ಕಿತ್ತು ಹಾಕುತ್ತೀನಿ. ಮೊದಲು ಸರಿಯಾಗಿ ನಿಂತ್ಕೊ ಎನ್ನುತ್ತಲೇ ಸೈಲೆಂಟ್‌ ಸುನೀಲ್‌ನನ್ನು ಹೊಡೆಯುವ ಹಾಗೇ ಹೋಗಿ ಸಿಟ್ಟಿನಿಂದ ಕಿವಿ ಹಿಂಡಿದರು. ಈತನ ಎಲ್ಲ ವ್ಯವಹಾರಗಳನ್ನು ಪರಿಶೀಲಿಸಿ, ಯಾರಾರ‍ಯರಿಗೆ ಬೆದರಿಸಿ ಹಣ ವಸೂಲಿ ಮಾಡಿದ್ದಾನೆ ಎಂದು ತಿಳಿದುಕೊಂಡು ಕೇಸ್‌ ದಾಖಲಿಸಿ ಒಳಗೆ ಕಳುಹಿಸಿ. ಬುದ್ಧಿ ಬರಲಿ ಎಂದು ಎಸಿಪಿ ವೇಣುಗೋಪಾಲ್‌ ಅವರಿಗೆ ಸೂಚಿಸಿದರು.

ರೌಡಿಗಳಿಗೆ ಎಚ್ಚರಿಕೆ ನೀಡುವ ವೇಳೆ ಹಲವು ಮಂದಿ ಕೂದಲು, ಗಡ್ಡ ಬಿಟ್ಟಿದ್ದರು. ಇದರಿಂದ ಕೋಪಗೊಂಡ ಅಲೋಕ್‌. ‘ಕಾಡು ಪ್ರಾಣಿಗಳ ಹಾಗೇ ಇದ್ದೀರಾ. ಮೊದಲು ಕಟ್ಟಿಂಗ್‌, ಶೇವಿಂಗ್‌ ಮಾಡಿಸಿ. ಫೋಟೋ ಕಳುಹಿಸಿ. ನಿಮ್ಮೆಲ್ಲರ ಮೊಬೈಲ್‌ ಸಂಖ್ಯೆಯನ್ನು ಕೊಟ್ಟು ಹೋಗಿ’ ಎಂದು ಸೂಚಿಸಿದರು.