ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವರಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ದೆಹಲಿಯ ಫಿರೋಜ್ ಷಾ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತ್ ಕುಮಾರ್ ಹೆಗಡೆ ಮೊದಲ ಬಾರಿಗೆ ಮಾಧ್ಯಮದವರ ಜತೆಗೆ ಮಾತನಾಡಿದರು. ಹಿಂದುತ್ವವಾದದ ಉಗ್ರ ಭಾಷಣಗಳಿಗೇ ಹೆಸರುವಾಸಿಯಾಗಿರುವ ಅವರು ತಮ್ಮ ಎಂದಿನ ನೇರಾನೇರಾ ಶೈಲಿಯಲ್ಲೇ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಮಂತ್ರಿಯಾಗಿ ಹೇಗೆ ಕೆಲಸ ಮಾಡುತ್ತೇನೆ ಎಂಬುದುನ್ನು ನೀವೇ ನೋಡುತ್ತೀರಿ. ನಾನೀಗ ಉತ್ತರ ಕನ್ನಡಕ್ಕಷ್ಟೇ ಸೀಮಿತವಾದವನಲ್ಲ, ಇಡೀ ದೇಶದ ಕೆಲಸ ಮಾಡುವ ಹೊಣೆಗಾರಿಕೆ ತಮ್ಮ ಹೆಗಲೇರಿದೆ ಎನ್ನುವ ಸಂದೇಶವನ್ನೂ ರವಾನಿಸಿದ್ದಾರೆ.

ನವದೆಹಲಿ(ಸೆ.04): ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವರಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ದೆಹಲಿಯ ಫಿರೋಜ್ ಷಾ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತ್ ಕುಮಾರ್ ಹೆಗಡೆ ಮೊದಲ ಬಾರಿಗೆ ಮಾಧ್ಯಮದವರ ಜತೆಗೆ ಮಾತನಾಡಿದರು. ಹಿಂದುತ್ವವಾದದ ಉಗ್ರ ಭಾಷಣಗಳಿಗೇ ಹೆಸರುವಾಸಿಯಾಗಿರುವ ಅವರು ತಮ್ಮ ಎಂದಿನ ನೇರಾನೇರಾ ಶೈಲಿಯಲ್ಲೇ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಮಂತ್ರಿಯಾಗಿ ಹೇಗೆ ಕೆಲಸ ಮಾಡುತ್ತೇನೆ ಎಂಬುದುನ್ನು ನೀವೇ ನೋಡುತ್ತೀರಿ. ನಾನೀಗ ಉತ್ತರ ಕನ್ನಡಕ್ಕಷ್ಟೇ ಸೀಮಿತವಾದವನಲ್ಲ, ಇಡೀ ದೇಶದ ಕೆಲಸ ಮಾಡುವ ಹೊಣೆಗಾರಿಕೆ ತಮ್ಮ ಹೆಗಲೇರಿದೆ ಎನ್ನುವ ಸಂದೇಶವನ್ನೂ ರವಾನಿಸಿದ್ದಾರೆ.

-ಮಂತ್ರಿಯಾಗುವ ನಿರೀಕ್ಷೆಯಿತ್ತಾ? ನೀವು ಮಂತ್ರಿಯಾಗುತ್ತಿದ್ದೀರಿ ಎಂಬ ಮಾಹಿತಿ ಸಿಕ್ಕಿದ್ದು ಎಷ್ಟು ಹೊತ್ತಿಗೆ?

ನನಗೆ ಎಲ್ಲವೂ ಅನಿರೀಕ್ಷಿತ. ನನ್ನ ರಾಜಕೀಯ ಪ್ರವೇಶದಿಂದ ಹಿಡಿದು ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದವರೆಗೆ ನಾನು ಯಾವುದನ್ನೂ ನಿರೀಕ್ಷೆ ಮಾಡಿರಲಿಲ್ಲ. ನಾನು ರಾಜಕೀಯಕ್ಕೆ ಬರುವ ನಿರೀಕ್ಷೆಯನ್ನೂ ಇಟ್ಟುಕೊಂಡವನಲ್ಲ. ಸಂಘಟನೆಯ ಹಿರಿಯರು ರಾಜಕೀಯಕ್ಕೆ ಬರಲು ಹೇಳಿದ್ದರಿಂದ ಬಂದೆ. ನನಗೆ ಮಂತ್ರಿಯಾಗುವ, ಇದೇ ಖಾತೆ ಬೇಕು ಎನ್ನುವ ನಿರೀಕ್ಷೆಗಳು ಇರಲಿಲ್ಲ. ಉಳಿದಂತೆ ಎಷ್ಟು ಹೊತ್ತಿಗೆ ಮಾಹಿತಿ ಸಿಕ್ಕಿತು ಎಂಬ ಅಂಶ ಈಗ ಅಗತ್ಯವಿಲ್ಲ.

-ಮಂತ್ರಿಯಾದ ಮೇಲೆ ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಲಿವೆ, ಅವುಗಳನ್ನು ಹೇಗೆ ನಿಭಾಯಿಸುತ್ತೀರಿ?

ಎಲ್ಲರಿಗೂ ಇರುವ ಜವಾಬ್ದಾರಿಗಳೇ ನನಗೂ ಇರಲಿವೆ. ಕೆಲಸ ಸ್ವಲ್ಪ ಹೆಚ್ಚಾಗಬಹುದು. ಹೇಗೆ ಕೆಲಸ ಮಾಡುತ್ತೇನೆ ಎಂಬುದನ್ನು ನೀವೇ ಮುಂದೆ ನೋಡಿ.

-ಸಚಿವರಾಗಿ ಮುಂದೆ ಏನು ಮಾಡಬೇಕೆಂದಿದ್ದೀರಾ?

ನಾನೇನು ಅಜೆಂಡಾ ಪೇಪರ್ ಇಟ್ಟುಕೊಂಡಿಲ್ಲ, ಅದು ಸಂಸತ್ತಿನಲ್ಲಿ ಇರುತ್ತದೆ.

-ಅನಂತ್‌ಕುಮಾರ್ ಹೆಗಡೆ ಅವರುಕಟು ಹಿಂದುತ್ವವಾದಿ. ಅದಕ್ಕಾಗಿಯೇ ಸಚಿವ ಸ್ಥಾನ ನೀಡಲಾಗಿದೆಯೇ?

ನೋಡಿ ಹಿಂದುತ್ವ ಬೇರೆಯಲ್ಲ, ರಾಷ್ಟ್ರೀಯವಾದ ಬೇರೆಯಲ್ಲ. ನಾನು ರಾಷ್ಟ್ರೀಯವಾದವನ್ನು ಪ್ರಬಲವಾಗಿ ಪ್ರತಿಪಾದಿಸುವವನು. ಹಿಂದುತ್ವವಾದವನ್ನು ಇದರಿಂದ ಪ್ರತ್ಯೇಕಿಸಿ ನೋಡಬೇಡಿ. ಹಿಂದುತ್ವ ಮತ್ತು ರಾಷ್ಟ್ರೀಯವಾದವನ್ನು ವಿವಾದಾತ್ಮಕ ಎಂದು ನೋಡುವುದು ಮೂರ್ಖತನ.

-2018ರ ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ನಿಮಗೆ ಸಚಿವರಾಗುವ ಅವಕಾಶ ನೀಡಲಾಗಿದೆ ಎಂಬ ಮಾತಿದೆಯಲ್ಲಾ?

2019ರ ಲೋಕಸಭೆ ಚುನಾವಣೆ ಮತ್ತು ರಾಜ್ಯದಲ್ಲಿ 2018ರ ವಿಧಾನಸಭಾ ಚುನಾವಣೆ ಎರಡರಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಬಿ.ಎಸ್ .ಯಡಿಯೂರಪ್ಪ ನೇತೃತ್ವದಲ್ಲಿ ನಾವು ಸಮರ್ಥವಾಗಿ ಚುನಾವಣೆ ಎದುರಿಸುತ್ತೇವೆ ಮತ್ತು ಮತ್ತೆ ಅಧಿಕಾರ ಪಡೆಯುತ್ತೇವೆ. ಕರ್ನಾಟಕದಲ್ಲಿನ ಕಾಂಗ್ರೆಸ್ ನಮಗೆ ಸವಾಲೇ ಅಲ್ಲ. ದೇಶದ ವಿವಿಧೆಡೆ ಕಾಂಗ್ರೆಸ್‌'ಗೆ ಯಾವ ಸ್ಥಿತಿ ಬಂದಿದೆಯೋ ಅದೇ ಸ್ಥಿತಿ ರಾಜ್ಯದಲ್ಲೂ ಕಾಂಗ್ರೆಸ್‌'ಗೆ ಬರಲಿದೆ.

-ಲಿಂಗಾಯತ ಸ್ವತಂತ್ರ ಧರ್ಮ ಚರ್ಚೆ ನಡೆಯುತ್ತಿದೆಯಲ್ವಾ?

ಧರ್ಮ ಸೂಕ್ಷ್ಮ ವಿಚಾರಗಳ ಬಗ್ಗೆ ರಾಜಕಾರಣಿಗಳು ಚರ್ಚೆ ನಡೆಸುವುದು ಸರಿಯಲ್ಲ. ಅದರ ಬಗ್ಗೆ ಸೂಕ್ತ ವೇದಿಕೆಯಲ್ಲಿ ಚರ್ಚೆ ಆಗಬೇಕು. ಆಯಾ ಧರ್ಮದಲ್ಲಿನ ಚಿಂತಕರು, ವಿದ್ವಾಂಸರು, ಸ್ವಾಮೀಜಿಗಳು ಆ ಬಗ್ಗೆ ಚರ್ಚೆ ನಡೆಸಬೇಕು. ರಾಜಕೀಯ ಪಕ್ಷಗಳು ಧರ್ಮದ ವಿಷಯಗಳಿಂದ ದೂರ ಇರಬೇಕು. ಧಾರ್ಮಿಕ ವಿಷಯಗಳಿಗೆ ರಾಜಕೀಯ ಬೆರೆಸಬಾರದು ಎಂಬುದು ನಮ್ಮ ಸ್ಪಷ್ಟ ನಿಲುವು. ಇದೇ ಕಾರಣಕ್ಕಾಗಿ ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಬಿಜೆಪಿ ಯಾವುದೇ ನಿಲುವು ವ್ಯಕ್ತಪಡಿಸಿಲ್ಲ.

-ಉತ್ತರಕನ್ನಡದಿಂದ 5ನೇ ಬಾರಿ ಸಂಸದರಾಗಿ ಆಯ್ಕೆಯಾಗಿ ಈಗ ಮಂತ್ರಿಯಾಗಿದ್ದೀರಿ. ಉತ್ತರಕನ್ನಡಕ್ಕೆ ಏನಾದರೂ ಕೊಡುಗೆ ನೀಡುವ ಕನಸು ಇಟ್ಟುಕೊಂಡಿದ್ದೀರಾ?

ನಾನು ಮಂತ್ರಿಯಾಗಿರುವುದು ದೇಶದ ಕೆಲಸ ಮಾಡಲೇ ಹೊರತು ಕೇವಲ ಉತ್ತರ ಕನ್ನಡದ್ದಲ್ಲ. ತಲೆಬುಡ ಇಲ್ಲದ ಕೆಲ ಮಾಧ್ಯಮಗಳು, ವಿಚಾರವಾದಿಗಳು ರಾಜಕೀಯವನ್ನು ಪ್ಯಾಕೇಜ್ ರೀತಿ ನೋಡುತ್ತಿವೆ. ಪ್ರತಿ ಕೆಲಸವನ್ನು ಚುನಾವಣಾ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಮಾಡಲು ಸಾಧ್ಯವಿಲ್ಲ. ನಾನು ಮಂತ್ರಿಯಾದ ಕಾರಣಕ್ಕೆ ನನ್ನ ಜಿಲ್ಲೆಗೆ ಏನು ಸಿಗುತ್ತದೆ, ರಾಜ್ಯಕ್ಕೆ ಏನು ಎಂದಷ್ಟೇ ನೋಡಬಾರದು. ರಾಜಕೀಯ ಪ್ಯಾಕೇಜ್ ಅಲ್ಲ.

-ನಿಮ್ಮ ಜಿಲ್ಲೆಯಲ್ಲಿ ಸಮಸ್ಯೆಗಳಿವೆ,ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ಏನು ಹೇಳುತ್ತೀರಿ?

ಕಸ್ತೂರಿ ರಂಗನ್ ವರದಿ ಕೇವಲ ಉತ್ತರ ಕನ್ನಡಕ್ಕೆ ಮಾತ್ರ ಸೀಮಿತವೇ?

-ಯಾವಾಗ ನಿಮ್ಮಕ್ಷೇತ್ರಕ್ಕೆ ಹೋಗುತ್ತಿದ್ದೀರಿ?

ಇನ್ನೂ ಯೋಚನೆ ಮಾಡಿಲ್ಲ. ಇಲ್ಲೇ ಕೆಲ ಕೆಲಸಗಳಿವೆ. ಮೂರ್ನಾಲ್ಕು ದಿನದ ನಂತರ ಹೋಗಲು ಸಾಧ್ಯವಾಗಬಹುದು

-ರಾಕೇಶ್ ಎಸ್. ಎನ್, ಕನ್ನಡಪ್ರಭ