ನವದೆಹಲಿ  (ಆ. 25): ಇತ್ತೀಚೆಗಷ್ಟೇ ಭಾರೀ ಮಳೆ ಹಾಗೂ ಪ್ರವಾಹದಿಂದ ಉಂಟಾದ ಹಾನಿ ಕುರಿತಾದ ಸಮೀಕ್ಷೆಗಾಗಿ ಕೇಂದ್ರದ ಅಧ್ಯಯನ ತಂಡ ಶನಿವಾರ ಕರ್ನಾಟಕಕ್ಕೆ ಆಗಮಿಸಲಿದೆ. ಕೇಂದ್ರದ ಅಂತರ್‌ ಸಚಿವಾಲಯದ ಈ ತಂಡ(ಐಎಂಸಿಟಿ)ಗಳಲ್ಲಿ ಹಣಕಾಸು, ರಸ್ತೆ ಸಾರಿಗೆ, ಗ್ರಾಮೀಣಾಭಿವೃದ್ಧಿ ಹಾಗೂ ಜಲಶಕ್ತಿ ಇಲಾಖೆಯ ಅಧಿಕಾರಿಗಳು ಸಹ ಇದ್ದು, ಆ.24ರಿಂದ 27ರವರೆಗೆ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ನೆರೆ ಹಾನಿಯಿಂದ ತತ್ತರಿಸಿದ ಹಲವು ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ಬಳಿಕ ಪ್ರವಾಹ ಹಾನಿ ಹಾಗೂ ರಕ್ಷಣಾ ಕಾರ್ಯಾಚರಣೆಗಳ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಅಲ್ಲದೆ, ಮಳೆ ಪ್ರವಾಹದಿಂದ ನಲುಗಿದ ಇತರ ರಾಜ್ಯಗಳಿಗೂ ಕೇಂದ್ರದ ಅಧ್ಯಯನ ತಂಡಗಳನ್ನು ರವಾನಿಸಲಾಗಿದೆ.

ದೇಶಾದ್ಯಂತ ಭಾರೀ ಮಳೆಯಿಂದ ಉಂಟಾದ ನೆರೆ ಪರಿಸ್ಥಿತಿಯಿಂದ ತತ್ತರಿಸಿದ ರಾಜ್ಯಗಳಿಗೆ ಪರಿಹಾರ ಸಾಮಗ್ರಿ ಹಾಗೂ ಹಣಕಾಸು ನೆರವು ನೀಡುವ ನಿಟ್ಟಿನಲ್ಲಿ ಇತ್ತೀಚೆಗಷ್ಟೇ ಆ.19ರಂದು ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿತ್ತು.

ಈ ಸಭೆಯಲ್ಲಿ 11 ರಾಜ್ಯಗಳ ನೆರೆ ಹಾನಿ ಅವಲೋಕನಕ್ಕಾಗಿ ಶೀಘ್ರವೇ ತಂಡಗಳನ್ನು ನಿರ್ಧಾರ ಕೈಗೊಳ್ಳಲಾಗಿತ್ತು. ಈ ಪ್ರಕಾರ ಪ್ರವಾಹದ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ, ಕೇರಳ, ಗುಜರಾತ್‌, ರಾಜಸ್ಥಾನ, ಬಿಹಾರ, ಮಹಾರಾಷ್ಟ್ರ, ತ್ರಿಪುರ, ಮೇಘಾಲಯ, ಅಸ್ಸಾಂ, ಹಿಮಾಚಲ ಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳಿಗೆ ಕೇಂದ್ರದ ತಂಡಗಳನ್ನು ರವಾನಿಸಲಾಗಿದೆ.