ಪಾಕ್‌ ಗಡಿಯಲ್ಲಿ ಹೈಅಲರ್ಟ್‌| 370ನೇ ವಿಧಿ ರದ್ದತಿಗೆ ಪಾಕಿಸ್ತಾನದಿಂದ ಪ್ರತೀಕಾರ ಸಾಧ್ಯತೆ

ನವದೆಹಲಿ[ಆ.10]: ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಮೋದಿ ಸರ್ಕಾರ ರದ್ದುಪಡಿಸಿದ ಬೆನ್ನಲ್ಲೇ, ಪಂಜಾಬ್‌ ಹಾಗೂ ರಾಜಸ್ಥಾನಗಳಲ್ಲಿ ಪಾಕಿಸ್ತಾನದಿಂದ ದಾಳಿ ನಡೆಯುವ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಪಾಕಿಸ್ತಾನ ತನ್ನ ಸೇನೆಯ ಮುಜಾಹಿದೀನ್‌ ಬೆಟಾಲಿಯನ್‌ ಅನ್ನು ಬಳಸಿಕೊಂಡು ಪಂಜಾಬ್‌ ಮತ್ತು ರಾಜಸ್ಥಾನ ಗಡಿಗಳ ಮೂಲಕ ಉಗ್ರರನ್ನು ಒಳನುಸುಳಿಸಿ ದಾಳಿಗೆ ಯತ್ನಿಸಬಹುದು ಎಂದು ಗುಪ್ತಚರ ಇಲಾಖೆಯ ವರದಿಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಕಾಶ್ಮೀರದಲ್ಲಿ 370ನೇ ವಿಧಿಯನ್ನುರದ್ದುಪಡಿಸಿದ ಬಳಿಕ ಪಾಕಿಸ್ತಾನದಿಂದ ಎದುರಾಗಬಹುದಾದ ಅಹಿತಕರ ಘಟನೆಗಳನ್ನು ಎದುರಿಸಲು ಕೇಂದ್ರ ಸರ್ಕಾರ ಗಡಿ ನಿಯಂತ್ರಣಾ ರೇಖೆಯಲ್ಲಿ ಹೆಚ್ಚುವರಿಯಾಗಿ ಭದ್ರತಾಪಡೆಗಳನ್ನು ನಿಯೋಜಿಸಿದೆ. ಪಾಕಿಸ್ತಾನದ ಗಡಿಗೆ ಸಮೀಪವಿರುವ ಜೋಧ್‌ಪುರ ಹಾಗೂ ಮತ್ತಿತರ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸುವಂತೆ ಗುಪ್ತಚರ ಸಂಸ್ಥೆಗಳು ಬಿಎಸ್‌ಎಫ್‌ಗೆ ಸೂಚನೆ ನೀಡಿವೆ.

ಪಾಕ್‌ನಿಂದ 200 ಉಗ್ರರಿಗೆ ತರಬೇತಿ:

ಭಾರತಕ್ಕೆ ಉಗ್ರರ ಒಳನುಸುಳುವಿಕೆ ಯತ್ನವನ್ನು ಹೆಚ್ಚಿಸುವ ನಿಟ್ಟಿನಿಂದ ಪಾಕ್‌ ಆಕ್ರಮಿತ ಕಾಶ್ಮೀರದ ಸ್ಥಳೀಯ ಯುವಕರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಭಯೋತ್ಪಾದಕ ಶಿಬಿರಗಳಲ್ಲಿ ಬೋಧನೆ ಹಾಗೂ ತರಬೇತಿ ನೀಡಲಾಗುತ್ತಿದೆ. ಪಿ.ಒ.ಕೆ.ಯ 150ರಿಂದ 200 ಸ್ಥಳೀಯರಿಗೆ ಭಯೋತ್ಪಾದಕ ತರಬೇತಿ ನೀಡುತ್ತಿರುವ ಬಗ್ಗೆ ಭದ್ರತಾ ಪಡೆಗಳಿಗೆ ವರದಿ ಲಭ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಮುದ್ರ ಮಾರ್ಗದಲ್ಲಿ ದಾಳಿ ಭೀತಿ: ಕರಾವಳಿ ಹೈ ಅಲರ್ಟ್‌

ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸಮುದ್ರ ಮಾರ್ಗದ ಮೂಲಕವೂ ದಾಳಿ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಹಿನ್ನೆಲೆಯಲ್ಲಿ 7514 ಕಿ.ಮೀ. ಉದ್ದದ ಕರಾವಳಿಯಲ್ಲಿ ಕಟ್ಟೆಚ್ಚರ ಘೋಷಣೆ ಮಾಡಲಾಗಿದೆ. ಪೂರ್ವ ಹಾಗೂ ಪಶ್ಚಿಮ ಕರಾವಳಿಯಲ್ಲಿ ಕಟ್ಟೆಚ್ಚರದಿಂದ ಇರಲು ನೌಕಾಪಡೆಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.