Asianet Suvarna News Asianet Suvarna News

ಭಾರತದ ತಾರಿಣಿಗಳ ವಿಶ್ವವಿಕ್ರಮ..! ಭಯಾನಕ ಸ್ಥಳವನ್ನು ಯಶಸ್ವಿಯಾಗಿ ದಾಟಿದ ಮಹಿಳಾ ತಂಡ

ಪೂರ್ಣ ಮಹಿಳಾ ಸಿಬ್ಬಂದಿಗಳಲ್ಲೇ ಒಳಗೊಂಡ ಐಎನ್‌ಎಸ್‌'ವಿ ತಾರಿಣಿ ನೌಕೆ, ವಿಶ್ವದಲ್ಲೇ ಅತ್ಯಂತ ಭಯಾನಕ ಎನ್ನಲಾದ ದಕ್ಷಿಣ ಅಮೆರಿಕದ ದಕ್ಷಿಣದ ತುತ್ತತುದಿಯಲ್ಲಿರುವ ಕೇಪ್‌ಹಾರ್ನ್ ಅನ್ನು ಸುತ್ತಿ ಭಯಾನಕ ಡ್ರೇಕ್ ಪ್ಯಾಸೇಜ್ ಅನ್ನು ದಾಟಿದೆ. ಸಮುದ್ರದಲ್ಲಿನ ಮೌಂಟ್ ಎವರೆಸ್ಟ್ ಎಂಬ ಖ್ಯಾತಿಯ ಜೊತೆಗೆ, ನಾವಿಕರ ಸ್ಮಶಾನ ಎಂಬ ಕುಖ್ಯಾತಿಯನ್ನೂ ಹೊಂದಿರುವ ಈ ಭಯಾನಕ ಸ್ಥಳವನ್ನು ಯಶಸ್ವಿಯಾಗಿ ಕ್ರಮಿಸಿರುವ ಭಾರತೀಯ ನೌಕಾ ತಂಡಕ್ಕೆ ಪ್ರಧಾನಿ ಮೋದಿಯಾಗಿ ಗಣ್ಯರಿಂದ ಶುಭಾಶಯದ ಮಹಾಪೂರವೇ ಹರಿದುಬಂದಿದೆ.

INSV Tarini crosses Cape Horn

ನವದೆಹಲಿ(ಜ.20): ನೌಕೆಯಲ್ಲೇ ವಿಶ್ವ ಪರ್ಯಟನೆ ಉದ್ದೇಶದಿಂದ ಕಳೆದ ಸೆ.10ರಂದು ಪ್ರಯಾಣ ಆರಂಭಿಸಿದ್ದ, ಭಾರತೀಯ ನೌಕಾಪಡೆಯ 6 ಮಹಿಳಾ ಸಿಬ್ಬಂದಿಗಳನ್ನು ಒಳಗೊಂಡ ತಂಡ, ಇದೀಗ ಹೊಸದೊಂದು ದಾಖಲೆ ಮಾಡಿದೆ.

ಪೂರ್ಣ ಮಹಿಳಾ ಸಿಬ್ಬಂದಿಗಳಲ್ಲೇ ಒಳಗೊಂಡ ಐಎನ್‌ಎಸ್‌'ವಿ ತಾರಿಣಿ ನೌಕೆ, ವಿಶ್ವದಲ್ಲೇ ಅತ್ಯಂತ ಭಯಾನಕ ಎನ್ನಲಾದ ದಕ್ಷಿಣ ಅಮೆರಿಕದ ದಕ್ಷಿಣದ ತುತ್ತತುದಿಯಲ್ಲಿರುವ ಕೇಪ್‌ಹಾರ್ನ್ ಅನ್ನು ಸುತ್ತಿ ಭಯಾನಕ ಡ್ರೇಕ್ ಪ್ಯಾಸೇಜ್ ಅನ್ನು ದಾಟಿದೆ. ಸಮುದ್ರದಲ್ಲಿನ ಮೌಂಟ್ ಎವರೆಸ್ಟ್ ಎಂಬ ಖ್ಯಾತಿಯ ಜೊತೆಗೆ, ನಾವಿಕರ ಸ್ಮಶಾನ ಎಂಬ ಕುಖ್ಯಾತಿಯನ್ನೂ ಹೊಂದಿರುವ ಈ ಭಯಾನಕ ಸ್ಥಳವನ್ನು ಯಶಸ್ವಿಯಾಗಿ ಕ್ರಮಿಸಿರುವ ಭಾರತೀಯ ನೌಕಾ ತಂಡಕ್ಕೆ ಪ್ರಧಾನಿ ಮೋದಿಯಾಗಿ ಗಣ್ಯರಿಂದ ಶುಭಾಶಯದ ಮಹಾಪೂರವೇ ಹರಿದುಬಂದಿದೆ. ಈ ಮಾರ್ಗವನ್ನು ಕ್ರಮಿಸುವುದರೊಂದಿಗೆ ಈ ತಂಡ ತನ್ನ ಯಾತ್ರೆಯ ಪೈಕಿ ಬಹುದೊಡ್ಡ ಸವಾಲನ್ನು ಯಶಸ್ವಿಯಾಗಿ ಮೆಟ್ಟಿ ನಿಂತಂತೆ ಆಗಿದೆ.

ನಾವಿಕ ಸಾಗರ ಪರಿಕ್ರಮ: ಜಾಗತಿಕ ವೇದಿಕೆಯಲ್ಲಿ ‘ನಾರಿ ಶಕ್ತಿ (ಮಹಿಳೆಯರ ಶಕ್ತಿ)’ಯನ್ನು ಪ್ರದರ್ಶಿಸುವ ಮತ್ತು ಸವಾಲು ಭರಿತ ವಾತಾವರಣದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪೂರ್ಣ ಪ್ರಮಾಣದಲ್ಲಿ ಮಹಿಳಾ ಸಿಬ್ಬಂದಿಗಳೇ ಇರುವ ತಂಡವೊಂದು ಕಳೆದ ಸೆ.10ರಂದು ಗೋವಾದಿಂದ ವಿಶ್ವಪರ್ಯಟನೆ ಆರಂಭಿಸಿತ್ತು. ವರ್ತಿಕಾ ಜೋಶಿ ನೇತೃತ್ವದ ಈ ತಂಡ 165 ದಿನಗಳಲ್ಲಿ ಪರ್ಯಟನೆ ಮುಗಿಸಿ 2018ರ ಏಪ್ರಿಲ್‌'ನಲ್ಲಿ ಭಾರತಕ್ಕೆ ಮರಳುವ ಗುರಿ ಹಾಕಿಕೊಂಡಿತ್ತು. 5 ಹಂತಗಳಲ್ಲಿ ನಡೆಯುವ 165 ದಿನಗಳ ಈ ವಿಶ್ವಪರ್ಯಟನೆ ವೇಳೆ ಕೇವಲ 4 ಸ್ಥಳಗಳಲ್ಲಿ ಮಾತ್ರವೇ ತಾರಿಣಿ ನೌಕೆ ನಿಲುಗಡೆ ಮಾಡಲಿದ್ದು, ಉಳಿದ ದಿನಗಳನ್ನು ಯಾನಗಳಲ್ಲಿಯೇ ಕಳೆಯಲಿದೆ. ಮೊದಲು ಆಸ್ಟ್ರೇಲಿಯಾ, ನಂತರ ನ್ಯೂಜಿಲೆಂಡ್‌'ಗೆ ತೆರಳಿದ್ದ ತಾರಿಣಿ ನೌಕೆ ಇದೀಗ ವಿಶ್ವದಲ್ಲೇ ನಾವಿಕರಿಗೆ ಅತ್ಯಂತ ಭಯಾನಕ ಎನ್ನಲಾದ ದಕ್ಷಿಣ ಅಮೆರಿಕಾದ ದಕ್ಷಿಣ ತುದಿಯ ಕೇಪ್ ಹಾರ್ನ್ ಸುತ್ತಿ, ಭಯಾನಕ ಡ್ರೇಕ್ ಪ್ಯಾಸೇಜ್ ಅನ್ನು ದಾಟಿದೆ. ತಂಡ ಅಲ್ಲಿಂದ ಫಾಲ್ಕ್‌'ಲ್ಯಾಂಡ್ ದ್ವೀಪದಲ್ಲಿ ಪೋರ್ಟ್ ಸ್ಟಾನ್ಲಿಯತ್ತ ತೆರಳಿ ಅಲ್ಲಿ ತ್ರಿವರ್ಣ ಧ್ವಜ ಹಾರಿಸಿದೆ.

ಭಯಾನಕ ಏಕೆ?: ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಮುದ್ರಗಳು ಸೇರುವ ಈ ಜಾಗದಲ್ಲಿ ಸದಾ ಕಾಲ ಭಾರೀ ಎತ್ತರಕ್ಕೆ ಅಲೆಗಳು ಏಳುತ್ತವೆ ಮತ್ತು ಅವು ಭಾರೀ ತೀವ್ರತೆಯನ್ನು ಹೊಂದಿರುತ್ತವೆ. ಅಲ್ಲದೇ ಇಲ್ಲಿ ಭಾರೀ ವೇಗವಾಗಿ ಗಾಳಿ ಬೀಸುತ್ತದೆ. ನೀರ್ಗಲ್ಲುಗಳು ಸಮುದ್ರದೊಳಗಿನಿಂದಲೇ ತೇಲಿಕೊಂಡು ಬರುತ್ತಿರುತ್ತವೆ. ಇಂಥ ಮಾರ್ಗದಲ್ಲಿ ಅಷ್ಟೇನು ದೊಡ್ಡದಲ್ಲದ, ಜೊತೆಗೆ ಕೇವಲ ಮಹಿಳಾ ಸಿಬ್ಬಂದಿಗಳೇ ಇರುವ ನೌಕೆ ಸಾಗುವುದು ಭಾರೀ ಸಾಹಸದ ಕೆಲಸ. ಇದೀಗ ಈ ಮಾರ್ಗವನ್ನು ಭಾರತದ ನೌಕಾಪಡೆಯ 6 ಮಹಿಳಾ ಸಿಬ್ಬಂದಿ ತಾರಿಣಿ ನೌಕೆಯ ಮೂಲಕ ಯಶಸ್ವಿಯಾಗಿ ಕ್ರಮಿಸಿದ್ದಾರೆ. ಹೀಗಾಗಿಯೇ ಅವರ ಸಾಧನೆಯನ್ನು ಪ್ರಧಾನಿ ಮೋದಿ, ಗಣ್ಯರು ಬಹುವಾಗಿ ಹೊಗಳಿದ್ದಾರೆ.

Follow Us:
Download App:
  • android
  • ios