ಬೆಂಗಳೂರು[ಸೆ.19]: ನೆರೆ ಸಂತ್ರಸ್ತರಿಗೆ ಪರಿಹಾರ ವಿಳಂಬ ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವ ಕಾಂಗ್ರೆಸ್‌ ನಾಯಕರ ವಿರುದ್ಧ ರಾಜ್ಯ ಸರ್ಕಾರದ ಸಚಿವರಾದ ಸಿ.ಟಿ.ರವಿ, ಶ್ರೀರಾಮುಲು ಮತ್ತು ಆರ್‌.ಅಶೋಕ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಕಾಂಗ್ರೆಸ್‌ ನಾಯಕರು ಪ್ರತಿಭಟನೆ ಮಾಡುವ ಬದಲು ಪ್ರವಾಹ ಪೀಡಿತ ಪ್ರದೇಶಗಳ 10 ಗ್ರಾಮಗಳನ್ನು ದತ್ತು ಪಡೆಯಲಿ ಎಂದು ತಿರುಗೇಟು ನೀಡಿದರು.

ರಾಜ್ಯ ಸರ್ಕಾರದ ಅಧಿಕಾರಿಗಳು ನೆರೆ ಪರಿಹಾರ ವಿಚಾರವಾಗಿಯೇ ದೆಹಲಿಗೆ ತೆರಳಿದ್ದು, ಶೀಘ್ರದಲ್ಲೇ ಪರಿಹಾರ ಧನ ಬಿಡುಗಡೆಯಾಗುತ್ತದೆ. ಪ್ರಧಾನಿ ಮೋದಿ ಅವರು ಎಂದೂ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಅಥವಾ ಪಕ್ಷಪಾತ ಮಾಡುವುದಿಲ್ಲ. ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ನೆರೆ ಸಂತ್ರಸ್ತರಿಗೆ ತಲಾ 3,600 ರು. ಪರಿಹಾರ ನೀಡಲಾಗಿತ್ತು. ಈಗ ನಮ್ಮ ಸರ್ಕಾರ ತಲಾ 10 ಸಾವಿರ ರು. ಪರಿಹಾರ ನೀಡಿದ್ದೇವೆ ಎಂದರು.

ಕಂದಾಯ ಸಚಿವ, ಆರ್‌.ಅಶೋಕ್‌ ಮಾತನಾಡಿ, ರಾಜ್ಯದಲ್ಲಿ ಹಿಂದೆ ಪ್ರವಾಹವುಂಟಾದಾಗ ಪ್ರತಿ ಸಂತ್ರಸ್ತ ಕುಟುಂಬಕ್ಕೆ 10 ಸಾವಿರ ಪರಿಹಾರ ಕೊಟ್ಟಉದಾಹರಣೆ ಕಾಂಗ್ರೆಸ್‌ನಲ್ಲಿದ್ದರೆ ಹೇಳಲಿ ಎಂದು ಸವಾಲು ಹಾಕಿದರು. ಮನೆ ಹಾನಿಯಾದವರಿಗೆ 1 ಲಕ್ಷ ರು, ಪೂರ್ಣ ಮನೆ ಕಟ್ಟಿಕೊಳ್ಳಲು 5 ಲಕ್ಷ ರು. ಪರಿಹಾರ ನೀಡುವುದಾಗಿ ನಮ್ಮ ಸರ್ಕಾರ ಘೋಷಿಸಿದೆ. ಇಂತಹ ನಿದರ್ಶನ ಹಿಂದಿನ ಸರ್ಕಾರಗಳಲ್ಲಿ ಇದೆಯೇ ಎಂದು ಪ್ರಶ್ನಿಸಿದ ಅವರು, ನೆರೆಯಿಂದ ಒಟ್ಟಾರೆ 3500 ಕೋಟಿ ರು.ನಷ್ಟುಹಾನಿಯಾಗಿರುವುದಾಗಿ ಕೇಂದ್ರಕ್ಕೆ ವರದಿ ನೀಡಲಾಗಿದೆ. ಕೇಂದ್ರದಿಂದ ಪರಿಹಾರ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ, ನೆರೆ ಹಾನಿ ಬಗ್ಗೆ ಎಲ್ಲ ಸಚಿವರೂ ಪರಿಶೀಲಿಸಿ ಮುಖ್ಯಮಂತ್ರಿ ಅವರಿಗೆ ವರದಿ ನೀಡಿದ್ದೇವೆ. ಅದರ ಆಧಾರದಲ್ಲಿ ಸಂತ್ರಸ್ತರಿಗೆ ಪರಿಹಾರ ಒದಗಿಸಾಗುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್‌ ಅನಗತ್ಯವಾಗಿ ರಾಜಕೀಯ ಮಾಡಬಾರದು. ಕೇಂದ್ರಕ್ಕೂ ನೆರೆ ಪರಿಹಾರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರದ ತಂಡ ಬಂದು ಈಗಾಗಲೇ ಸಮೀಕ್ಷೆ ನಡೆಸಿ ಹೋಗಿದೆ. ಇಷ್ಟೆಲ್ಲಾ ಆದರೂ ಕಾಂಗ್ರೆಸ್‌ ನಾಯಕರು ಅನಗತ್ಯವಾಗಿ ಟೀಕಿಸುವುದು ಸರಿಯಲ್ಲ ಎಂದರು.