ಬೆಂಗಳೂರು(ಜ.13): ದೇಶದ ಎರಡನೇ ಅತೀ ದೊಡ್ಡ ಮಾಹಿತಿ ತಂತ್ರಜ್ಞಾನ ಸೇವೆಗಳ ಕಂಪನಿ ಇನ್ಫೋಸಿಸ್' ತನ್ನ ಮೂರನೇ ತ್ರೈ ಮಾಸಿಕ ಆಯವ್ಯಯ ವರದಿಯನ್ನು ಪ್ರಕಟಿಸಿದ್ದು, ಶೇ.7 ರಷ್ಟು ಏರಿಕೆಯೊಂದಿಗೆ 3,708 ಕೋಟಿ ರೂ. ಆದಾಯ ದಾಖಲಿಸಿದೆ.

ಕಳೆದ ವರ್ಷದ 9 ತಿಂಗಳ ಅವಧಿಯಲ್ಲಿ ಇನ್ಫೋಸಿಸ್' 51,364 ಕೋಟಿ ರೂ. ಲಾಭದೊಂದಿಗೆ ಅಭಿವೃದ್ಧಿಯಲ್ಲಿ ಶೇ.11.9ರಷ್ಟು ಏರಿಕೆಯಾಗಿದೆ. ಇದರಲ್ಲಿ ನಿವ್ವಳ ಆದಾಯ 10,749 ಕೋಟಿ ದಾಖಲಿಸಿ ಶೇಕಡವಾರು 8.6 ರಷ್ಟು ಹೆಚ್ಚಾಗಿದೆ. ಭಾರತದ ಅತಿದೊಡ್ಡ ಐಟಿ ರಫ್ತುದಾರ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಶೇ.11 ಆದಾಯದೊಂದಿಗೆ 6,778 ಕೋಟಿ ರೂ. ಲಾಭ ಗಳಿಸಿತ್ತು.

'ನಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಕಂಪನಿಯ ಉತ್ತಮ ಪ್ರಗತಿ ಸಾಧಿಸಿದೆ' ಎಂದು ಕಂಪನಿಯ ಸಿಇಒ ಮತ್ತು ಎಂಡಿ ವಿಶಾಲ್ ಸಿಕ್ಕಾ' ತಿಳಿಸಿದ್ದಾರೆ.

ಕಂಪನಿಯು ಈ ಸಂದರ್ಭದಲ್ಲಿ ರವಿ ಕುಮಾರ್ ಎಂಬುವವರನ್ನು ಡೆಪ್ಯುಟಿ ಸಿಇಒ ಆಗಿ ನೇಮಕ ಮಾಡಿಕೊಂಡಿರುವುದಾಗಿ ಘೋಷಿಸಿದೆ. ಇವರು ಜಾಗತಿಕ ವಿತರಣಾ ಸಂಘಟನೆಯ ಕಾರ್ಯಗಳ ಮುಖ್ಯಸ್ಥನ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ.