ಬ್ರಿಟನ್ ಪ್ರಧಾನಿ ಸಂಪುಟಕ್ಕೆ ನಾರಾಯಣ್ ಮೂರ್ತಿ ಅಳಿಯ!
ಬ್ರಿಟನ್ ನೂತನ ಪ್ರಧಾನಿ ಬೋರಿಸ್ ಜಾನ್ಸನ್ ಸಂಪುಟದಲ್ಲಿ ಮೂವರು ಭಾರತೀಯರು| ಜಾನ್ಸನ್ ಸಂಪುಟ ಸೇರಿದ ನಾರಾಯಣ್ ಮೂರ್ತಿ ಅಳಿಯ ರಿಷಿ ಸುನಕ್| ರಿಷಿ ರಿಚ್ಮಂಡ್ (ಯಾರ್ಕ್ ಶೈರ್) ಕ್ಷೇತ್ರದ ಕನ್ಸರ್ವೇಟಿವ್ ಪಕ್ಷದ ಸಂಸದ| ನಾರಾಯಣ್ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿ ಪತಿ ರಿಷಿ ಸುನಕ್|
ಲಂಡನ್(ಜು.25): ಬ್ರಿಟನ್ ನೂತನ ಪ್ರಧಾನಿ ಬೋರಿಸ್ ಜಾನ್ಸನ್ ಅವರ ನೂತನ ಸಚಿವ ಸಂಪುಟದಲ್ಲಿ, ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ್ ಮೂರ್ತಿ ಅವರ ಅಳಿಯ ರಿಷಿ ಸುನಕ್ ಸೇರ್ಪಡೆಯಾಗಿದ್ದಾರೆ.
39 ವರ್ಷದ ರಿಷಿ ರಿಚ್ಮಂಡ್ (ಯಾರ್ಕ್ ಶೈರ್) ಕ್ಷೇತ್ರದ ಕನ್ಸರ್ವೇಟಿವ್ ಪಕ್ಷದ ಸಂಸದರಾಗಿದ್ದು, ಬ್ರೆಕ್ಸಿಟ್ ಪರ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ರಿಷಿ ತಾವು ಬ್ರಿಟನ್ ಸರ್ಕಾರದ ಖಜಾನೆ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಆಗಿದ್ದಾರೆ.
ಇಂಗ್ಲೆಂಡ್’ನಲ್ಲಿ ಜನಿಸಿದ್ದ ರಿಶಿಯವರ ತಾಯಿ ಓರ್ವ ಔಷಧ ತಜ್ಞೆಯಾಗಿದ್ದು, ತಂದೆ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ ಸಾಮಾನ್ಯ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ನಾರಾಯಣ್ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ರಿಷಿ ವಿವಾಹವಾಗಿದ್ದಾರೆ.
ಬ್ರಿಟನ್ ಪ್ರಧಾನಿಗಳ ಸಚಿವ ಸಂಪುಟದಲ್ಲಿ ಒಟ್ಟಾರೆ ಮೂವರು ಭಾರತೀಯರು ಸ್ಥಾನ ಪಡೆದಿದ್ದು, ಅಲೋಕ್ ಶರ್ಮಾ ಮತ್ತು ಪ್ರೀತಿ ಪಟೇಲ್ ಹಾಗೂ ರಿಷಿ ಸುನಕ್ ಅವರೇ ಈ ಮೂವರು ಭಾರತೀಯರು.