ಜಕರ್ತಾ/ನವದೆಹಲಿ[ಆ.03]: ದಕ್ಷಿಣ ಇಂಡೋನೇಷ್ಯಾದಲ್ಲಿರುವ ಪ್ರಸಿದ್ಧ ಹಾಗೂ ಭಾರೀ ಜನಸಂಖ್ಯೆಯಿಂದ ಕೂಡಿರುವ ಜಾವಾ ದ್ವೀಪ ಪ್ರದೇಶದಲ್ಲಿ ಶುಕ್ರವಾರ ಪ್ರಬಲ ಭೂಕಂಪ ಸಂಭವಿಸಿದೆ. ಇದರ ಬೆನ್ನಲ್ಲೇ ಸುನಾಮಿ ಭೀತಿ ವ್ಯಕ್ತವಾಗಿದೆ. ಭಾರತೀಯ ಕರಾವಳಿಗೂ ಸುನಾಮಿ ಅಪ್ಪಳಿಸಬಹುದು ಎಂಬ ಸೂಚನೆಯನ್ನು ರಾಷ್ಟ್ರೀಯ ಸಾಗರ ಮಾಹಿತಿ ಸೇವಾ ಕೇಂದ್ರ ಶುಕ್ರವಾರ ಸಂಜೆ ನೀಡಿತ್ತು. ಅದು ಆತಂಕಕ್ಕೂ ಕಾರಣವಾಗಿತ್ತು. ಕೆಲ ಹೊತ್ತಿನಲ್ಲೇ ಆ ಸೂಚನೆ ಹಿಂಪಡೆದು, ಇಂಡೋನೇಷ್ಯಾ ಭೂಕಂಪದಿಂದ ಭಾರತಕ್ಕೆ ಸುನಾಮಿ ಭೀತಿ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಇಂಡೋನೇಷ್ಯಾ ರಾಜಧಾನಿ ಜಕಾರ್ತದಿಂದ 150 ಕಿ.ಮೀ. ದೂರದಲ್ಲಿರುವ ಸಾಗರದಲ್ಲಿ 42 ಕಿ.ಮೀ. ಆಳದೊಳಗೆ ಶುಕ್ರವಾರ ಭೂಕಂಪ 7.4 ತೀವ್ರತೆಯ ಭೂಕಂಪ ಸಂಭವಿಸಿದೆ. ಹೀಗಾಗಿ ಸುನಾಮಿ ಉಂಟಾಗಬಹುದು ಎಂದು ಇಂಡೋನೇಷ್ಯಾದ ವಿಪತ್ತು ನಿರ್ವಹಣಾ ಸಂಸ್ಥೆ ಎಚ್ಚರಿಕೆ ನೀಡಿತು. ಇದಾದ ಕೆಲವೇ ಹೊತ್ತಿನಲ್ಲೇ ಭೂಕಂಪದ ತೀವ್ರತೆಯನ್ನು 6.8ಕ್ಕೆ ತಗ್ಗಿಸಿತು. ಆದಾಗ್ಯೂ ಭೀತಿಯಿಂದ ಜನರು ಕಟ್ಟಡದಿಂದ ಹೊರಗೆ ಓಡಿ ಬಂದರು.

ಹೀಗಾಗಿ ಈ ಪ್ರದೇಶದಲ್ಲಿರುವ ಜನರು ಆತಂಕಕ್ಕೀಡಾಗಿದ್ದಾರೆ. ಭೂಕಂಪದಿಂದ ಯಾವುದೇ ಸಾವು-ನೋವು ಸಂಭವಿಸಿರುವ ಕುರಿತು ಇದುವರೆಗೂ ವರದಿಯಾಗಿಲ್ಲ. ಈ ಭೂಕಂಪದ ತೀವ್ರತೆ ಸುನಾಮಿ ಸಂಭವಿಸಲು ಕಾರಣವಾಗಬಹುದು ಎಂದು ಇಂಡೋನೇಷಿಯಾದ ವಿಪತ್ತು ನಿರ್ವಹಣಾ ಸಂಸ್ಥೆ ಮುನ್ನೆಚ್ಚರಿಕೆ ನೀಡಿದೆ. ಮೊದಲಿಗೆ ಇಂಡೋನೇಷಿಯಾದ ವಿಪತ್ತು ನಿರ್ವಹಣಾ ಸಂಸ್ಥೆ, 10 ಕಿ.ಮೀವರೆಗಿನ ಭೂಮಿಯ ಅಂತರಾಳದಲ್ಲಿ ಭೂಕಂಪದ ತೀವ್ರತೆ 7.4ರಷ್ಟುದಾಖಲಾಗಿದ್ದು, ಸುನಾಮಿ ಸಹ ಸಂಭವಿಸಬಹುದು ಎಂದು ಹೇಳಿತ್ತು. ಆದರೆ, ಅಮೆರಿಕದ ಭೂ ವಿಜ್ಞಾನ ಸಮೀಕ್ಷೆ 6.8ರಷ್ಟುತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಸ್ಪಷ್ಟನೆ ನೀಡಿದೆ. ಇನ್ನು ಭೂಮಿ ಕಂಪಿಸಿದ ತೀವ್ರತೆಗೆ ಸಾರ್ವಜನಿಕರು ತಮ್ಮ ಕಟ್ಟಡಗಳು ಮತ್ತು ಮನೆಯೊಳಗಿದ್ದ ಜನರು, ಹೊರಬಂದಿದ್ದರು.

ಏತನ್ಮಧ್ಯೆ, ಶುಕ್ರವಾರ ಸಂಜೆ ಇಂಡೋನೇಷಿಯಾದಲ್ಲಿ ಸಂಭವಿಸಿದ ಭೂಕಂಪದಿಂದ ಭಾರತದಲ್ಲಿ ಸುನಾಮಿ ಎದುರಾಗುವ ಯಾವುದೇ ಭೀತಿ ಇಲ್ಲ ಎಂದು ಸಮುದ್ರದ ಮಾಹಿತಿ ಸೇವೆಗಳಿಗಾಗಿನ ಭಾರತೀಯ ರಾಷ್ಟ್ರೀಯ ಕೇಂದ್ರದ ಅಧಿಕಾರಿಗಳು ಅಭಯ ನೀಡಿದ್ದಾರೆ.