ರಾಜಧಾನಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳ ಸಂಖ್ಯೆ ಯನ್ನು 198ಕ್ಕೆ ಸೀಮಿತಗೊಳಿಸದೇ ಶಾಲಾ-ಕಾಲೇಜು, ಆಸ್ಪತ್ರೆಗಳು, ರೈಲ್ವೆ ಮತ್ತು ಬಸ್ ನಿಲ್ದಾಣಗಳು ಸೇರಿದಂತೆ ಜನಸಂಖ್ಯೆ ಹೆಚ್ಚಾಗಿರುವ ಇತರೆ ಪ್ರದೇಶಗಳಲ್ಲೂ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಬೆಂಗಳೂರು : ರಾಜಧಾನಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳ ಸಂಖ್ಯೆ ಯನ್ನು 198ಕ್ಕೆ ಸೀಮಿತಗೊಳಿಸದೇ ಶಾಲಾ-ಕಾಲೇಜು, ಆಸ್ಪತ್ರೆಗಳು, ರೈಲ್ವೆ ಮತ್ತು ಬಸ್ ನಿಲ್ದಾಣಗಳು ಸೇರಿದಂತೆ ಜನಸಂಖ್ಯೆ ಹೆಚ್ಚಾಗಿರುವ ಇತರೆ ಪ್ರದೇಶಗಳಲ್ಲೂ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ವಿಧಾನಸೌಧ ಮುಂಭಾಗ ಶುಕ್ರವಾರ 24 ಮೊಬೈಲ್ ಇಂದಿರಾ ಕ್ಯಾಂಟೀನ್‌ಗಳ ಸೇವೆಗೆ ಚಾಲನೆ ನೀಡಿದ ಅವರು, ಈಗಾಗಲೇ 174 ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಿದ್ದು, ಬಡ ಜನರಿಗೆ ಕಡಿಮೆ ದರದಲ್ಲಿ ನಿತ್ಯ ಊಟ, ತಿಂಡಿ ಪೂರೈಸುತ್ತಿವೆ. 24 ವಾರ್ಡ್‌ಗಳಲ್ಲಿ ಸೂಕ್ತ ಸ್ಥಳಾವಕಾಶ ದೊರೆಯದ ಹಿನ್ನೆಲೆಯಲ್ಲಿ ಅಲ್ಲಿ ಮೊಬೈಲ್ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗಿದೆ. ಇವು ನಿತ್ಯ ನಿಗದಿತ ವಾರ್ಡ್‌ಗಳಿಗೆ ತೆರಳಿ ಜನರಿಗೆ ಮೂರು ಹೊತ್ತು ಆಹಾರ ಪೂರೈಸುತ್ತವೆ ಎಂದು ಹೇಳಿದರು.

ಶಾಲಾ, ಕಾಲೇಜು, ಆಸ್ಪತ್ರೆಗಳು, ರೈಲ್ವೆ ಮತ್ತು ಬಸ್ ನಿಲ್ದಾಣಗಳು ಸೇರಿದಂತೆ ಅವಶ್ಯಕತೆ ಇರುವ, ಹೆಚ್ಚು ಜನಸಂಖ್ಯೆ ಇರುವ ಕಡೆಗಳಲ್ಲಿ ಇನ್ನಷ್ಟು ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲು ಬಿಬಿಎಂಪಿಗೆ ಸೂಚನೆ ನೀಡಲಾಗಿದೆ. ಇದಕ್ಕೆ ಅಗತ್ಯ ಅನುದಾನವನ್ನು ಸರ್ಕಾರ ಒದಗಿಸಲಿದೆ ಎಂದು ತಿಳಿಸಿದರು.

16 ಮೊಬೈಲ್ ಕ್ಯಾಂಟೀನ್: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, 14 ಲಕ್ಷ ರು. ವೆಚ್ಚದಲ್ಲಿ ಪ್ರತಿ ಸಂಚಾರಿ ಇಂದಿರಾ ಕ್ಯಾಂಟೀನ್ ಗಳನ್ನು ನಿರ್ಮಿಸಲಾಗಿದೆ. ಆಹಾರ ವಿತರಣೆ, ನಗದು ಕೌಂಟರ್‌ಗಳನ್ನು ಪ್ರತ್ಯೇಕವಾಗಿ ರೂಪಿಸಲಾಗಿದೆ. 250 ಲೀಟರ್ ಕುಡಿಯುವ ನೀರು, 350 ಲೀಟರ್ ಕೈ ತೊಳೆಯುವ ನೀರು ಹಾಗೂ 500 ಲೀಟರ್‌ನಷ್ಟು ತ್ಯಾಜ್ಯ ನೀರು ಶೇಖರಣೆಗೆ ಪ್ರತಿಯೊಂದರಲ್ಲೂ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ 16 ಮೊಬೈಲ್ ಕ್ಯಾಂಟೀನ್‌ಗಳಿಗೆ ಚಾಲನೆ ದೊರೆತಿದ್ದು, ಉಳಿದ 6 ಕ್ಯಾಂಟೀನ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ.

ಇವು ಮುಂದಿನ ಐದು ದಿನಗಳ ಕಾಲ ಪ್ರಾಯೋಗಿಕವಾಗಿ ಕಾರ್ಯ ನಿರ್ವಹಿಸಲಿವೆ. ಫೆ.1ರಿಂದ ಅಧಿಕೃತವಾಗಿ ಸೇವೆ ಆರಂಭಿಸಲಿವೆ ಎಂದು ತಿಳಿಸಿದರು. ಮೊಬೈಲ್ ಕ್ಯಾಂಟೀನ್‌ಗಳ ಸುರಕ್ಷತೆ ದೃಷ್ಟಿಯಿಂದ ಪ್ರತಿ ವಾಹನಕ್ಕೆ ನಾಲ್ಕು ಸಿಸಿ ಕ್ಯಾಮರಾ, ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಲಾಗಿದೆ.

ಈ ಕ್ಯಾಂಟಿನ್ಗಳಿಂದ ತಿಂಗಳಿಗೆ 10.80 ಲಕ್ಷ ಜನರಿಗೆ ಇವುಗಳಿಂದ ಊಟ, ತಿಂಡಿ ಪೂರೈಸಬಹುದಾಗಿದೆ ಎಂದು ತಿಳಿಸಿದರು. ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಸರ್ಕಾರದ ಮುಖ್ಯಕಾರ್ಯದರ್ಶಿ ರತ್ನಪ್ರಭಾ, ಮೇಯರ್ ಸಂಪತ್‌ರಾಜ್, ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ವಿಧಾನಪರಿಷತ್ ಸದಸ್ಯ ಪಿ.ಆರ್.ರಮೇಶ್ ಉಪಸ್ಥಿತರಿದ್ದರು.