ಬೆಂಗಳೂರು[ಅ.06]: ಕಡಿಮೆ ದರದಲ್ಲಿ ಬಡವರಿಗೆ ಊಟ, ತಿಂಡಿ ನೀಡುವ ಉದ್ದೇಶದಿಂದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ ‘ಇಂದಿರಾ ಕ್ಯಾಂಟೀನ್‌’ ಕಾರ್ಯಕ್ರಮದ ನಿರ್ವಹಣೆಯನ್ನು ಧಾರ್ಮಿಕ ಸಂಸ್ಥೆಗಳು ಸೇರಿದಂತೆ ಖಾಸಗಿ ಸಂಸ್ಥೆಗಳಿಗೆ ವಹಿಸಲು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ.

ಇಂದಿರಾ ಕ್ಯಾಂಟೀನ್‌ ಯೋಜನೆಯಲ್ಲಿ ಅವ್ಯವಹಾರ, ಕಳಪೆ ಗುಣಮಟ್ಟದ ಆಹಾರ ಪೂರೈಕೆ, ತಪ್ಪು ಲೆಕ್ಕ ನೀಡಿಕೆ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ವಹಣೆ ಜವಾಬ್ದಾರಿಯನ್ನು ಧರ್ಮಸ್ಥಳ, ಹೊರನಾಡಿನಂತಹ ಧಾರ್ಮಿಕ ಕ್ಷೇತ್ರಗಳು, ಇಸ್ಕಾನ್‌ ಸೇರಿದಂತೆ ಖಾಸಗಿ ಸಂಸ್ಥೆಗಳಿಗೆ ವಹಿಸುವ ಮೂಲಕ ಆಹಾರಕ್ಕೆ ‘ಪ್ರಸಾದ’ ಸ್ಪರ್ಶ ನೀಡಲು ಚಿಂತನೆ ಮಾಡುತ್ತಿದೆ.

‘ಇಂದಿರಾ ಕ್ಯಾಂಟೀನ್‌’ ಯೋಜನೆಯ ಹೆಸರಿನಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆಯುತ್ತಿದೆ. ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಕ್ಯಾಂಟೀನ್‌ ಕಟ್ಟಡಕ್ಕೆ .35ರಿಂದ .40 ಲಕ್ಷ ವೆಚ್ಚ ಮಾಡಲಾಗಿದೆ. ಇತ್ತೀಚೆಗೆ ಕ್ಯಾಂಟೀನ್‌ನಲ್ಲಿ ಊಟ, ತಿಂಡಿ ಮಾಡುವವರ ಸಂಖ್ಯೆ ಸಾಕಷ್ಟುಕಡಿಮೆಯಾಗಿದೆ. ಊಟ-ತಿಂಡಿ ಮಾಡಿರುವವರ ಕುರಿತು ನೀಡುತ್ತಿರುವ ಲೆಕ್ಕ ಸಂಶಯಾಸ್ಪದವಾಗಿದೆ. ಪೂರೈಸುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟುದೂರುಗಳು ಕೇಳಿ ಬರುತ್ತಿವೆ. ಖರ್ಚಾಗದೇ ಉಳಿದ ಆಹಾರ ಪದಾರ್ಥಗಳನ್ನು ಚೆಲ್ಲ ಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ‘ಇಂದಿರಾ ಕ್ಯಾಂಟೀನ್‌’ ಪ್ರಯೋಜನವನ್ನು ಹೆಚ್ಚು ಜನರು ಪಡೆಯಬೇಕು. ಬಡವರು ಸೇರಿದಂತೆ ಎಲ್ಲರೂ ಇಲ್ಲಿಯ ಆಹಾರವನ್ನು ಸೇವಿಸಬೇಕೆಂಬ ಕಾರಣದಿಂದ ಖಾಸಗಿಯವರಿಗೆ ವಹಿಸಲು ಸರ್ಕಾರ ಯೋಚಿಸುತ್ತಿದೆ.

ಧಾರ್ಮಿಕ ಸ್ಪರ್ಶ:

ಧರ್ಮಸ್ಥಳ, ಇಸ್ಕಾನ್‌ನಂತಹ ಧಾರ್ಮಿಕ ಸಂಸ್ಥೆಗಳು ಪ್ರತಿ ದಿನ ಸಾವಿರಾರು ಜನರಿಗೆ ಶುಚಿ, ರುಚಿಯಾದ ಆಹಾರ ನೀಡುತ್ತಿವೆ. ಹೀಗಾಗಿ ಇವುಗಳಿಗೆ ‘ಇಂದಿರಾ ಕ್ಯಾಂಟೀನ್‌’ ನಿರ್ವಹಣೆ ಜವಾಬ್ದಾರಿ ನೀಡುವುದರಿಂದ ಅವರು ನೀಡುವ ಆಹಾರವನ್ನು ಜನರು ‘ಪ್ರಸಾದ’ ಎಂದು ಭಾವಿಸಿ ಸೇವಿಸುತ್ತಾರೆ. ಆಹಾರ ಪದಾರ್ಥ ವ್ಯರ್ಥವಾಗುವುದಿಲ್ಲ ಎಂಬ ಕಾರಣದಿಂದ ಖಾಸಗಿಯವರಿಗೆ ವಹಿಸುವುದು ಸೂಕ್ತ ಎಂಬುದು ಸರ್ಕಾರದ ಆಲೋಚನೆಯಾಗಿದೆ ಎಂದು ಸರ್ಕಾರದ ಹಿರಿಯ ಸಚಿವರೊಬ್ಬರು ತಿಳಿಸಿದರು.