ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯಾಗಿರುವ ಇಂದಿರಾ ಕ್ಯಾಂಟೀನ್’ನ್ನು ಇಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಲೋಕಾರ್ಪಣೆ ಮಾಡಿದರು. ಹಸಿವು, ಅಪೌಷ್ಟಿಕತೆಯ ವಿರುದ್ಧ ಕರ್ನಾಟಕದಲ್ಲಿ ನಡೆಯುತ್ತಿರುವ ಸಮರಕ್ಕೆ ಈ ದಿನ ಐತಿಹಾಸಿಕ ದಿನ. ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಬೆಂಗಳೂರು: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯಾಗಿರುವ ಇಂದಿರಾ ಕ್ಯಾಂಟೀನ್’ನ್ನು ಇಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಲೋಕಾರ್ಪಣೆ ಮಾಡಿದರು.

ಹಸಿವು, ಅಪೌಷ್ಟಿಕತೆಯ ವಿರುದ್ಧ ಕರ್ನಾಟಕದಲ್ಲಿ ನಡೆಯುತ್ತಿರುವ ಸಮರಕ್ಕೆ ಈ ದಿನ ಐತಿಹಾಸಿಕ ದಿನ. ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಬೆಂಗಳೂರಿನ 198 ವಾರ್ಡ್’ಗಳಲ್ಲಿ ಮಾಡ್ಬೇಕಿತ್ತು, ಆದರೆ ಜಾಗದ ಸಮಸ್ಯೆಯಿಂದ ಅದು ಸಾಧ್ಯವಾಗಿಲ್ಲ. ಆದ್ರೆ 101 ಕ್ಯಾಂಟೀನ್’ಗಳು ಇಂದು ಲೋಕಾರ್ಪಣೆಯಾಗುತ್ತಿವೆ. ಶೀಘ್ರದಲ್ಲೇ ಎಲ್ಲಾ ಕಡೆ ಇಂದಿರಾ ಕ್ಯಾಂಟೀನ್ ಪೂರ್ಣಗೊಳ್ಳಿಲಿದೆ ಎಂದು ಅವರು ಹೇಳಿದ್ದಾರೆ.

ಉಳಿದ 97 ಕ್ಯಾಂಟೀನ್'ಗಳು ಅಕ್ಟೋಬರ್ 2ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಪ್ರಕಟಿಸಿದರು.

ಇದು ರಾಜಕೀಯ ಲಾಭಕ್ಕಾಗಿ ಮಾಡಿರುವ ಘೋಷಣೆ ಅಲ್ಲ, ಅಂಕಿ ಅಂಶಗಳ ಪ್ರಕಾರ ಬೆಂಗಳೂರು ನಗರದಲ್ಲಿ ಸರಾಸರಿ ಶೇ.28 ಮಕ್ಕಳು, ಶೇ. 18 ಮಹಿಳೆಯರು ಹಾಗೂ ಶೇ.18 ಪುರುಷರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಹೋಲಿಕೆ ಮಾಡಿದಾಗ, ನಮ್ಮ ರಾಜ್ಯದಲ್ಲಿ ಹಸಿವಿನಿಂದ ಬಳಲುತ್ತಿರುವ ಜನ ಜಾಸ್ತಿ ಇದ್ದಾರೆ. ಆದುದರಿಂದ ಇಂತಹ ಕ್ರಮಗಳು ಅತ್ಯಗತ್ಯವೆಂದು ಅವರು ಹೇಳಿದ್ದಾರೆ.

1 ಲಕ್ಷದ 8 ಸಾವಿರ ಕುಟುಂಬದ ಸುಮಾರು 4ಕೋಟಿ ಮಂದಿಗೆ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೇವೆ. ಅದನ್ನು ಅಧಿಕಾರಕ್ಕೆ ಬಂದಾಕ್ಷಣ ಉದ್ಘಾಟನೆ ಮಾಡಲಾಗಿದೆ. ನಮ್ಮರಾಜ್ಯದಲ್ಲಿ ಯಾರು ಹಸಿವಿನಿಂದ ಮಲಗಬಾರದು, ನಮ್ಮ ರಾಜ್ಯ ಹಸಿವು ಮುಕ್ತ ರಾಜ್ಯವಾಗಬೇಕು ಎಂದು ಸಿಎಂ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಅನ್ನ ಭಾಗ್ಯ ಯೋಜನೆಯಿಂದ ಗುಳೆ ಪದ್ಧತಿಗೆ ಬ್ರೇಕ್:

ಅನ್ನ ಭಾಗ್ಯ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಮನೆ-ಮಠ ಬಿಟ್ಟು, ಜಾನುವಾರುಗಳನ್ನು ಮಾರಿ ಗುಳೆ ಹೊರಡುವ ಪದ್ಧತಿ ಬಹುತೇಕವಾಗಿ ಕಡಿಮೆಯಾಗಿದೆ. ಭೀಕರ ಬರಗಾಲವಿದ್ದರು ಗುಳೆ ಹೋಗುವ ಅನಿವಾರ್ಯತೆ ಇಂದು ಇಲ್ಲವಾಗಿದೆ. ಹಸಿವಿನಿಂದ ಸತ್ತ ಒಂದೇ ಒಂದು ನಿದರ್ಶನ ರಾಜ್ಯದಲ್ಲಿ ಇಲ್ಲ ಎಂಬ ತೃಪ್ತಿ ನನಗಿದೆ, ಎಂದು ಸಿಎಂ ಹೇಳಿದ್ದಾರೆ.

ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ:

ಅನ್ನ ಭಾಗ್ಯ ಹಾಗೂ ಇಂದಿರಾ ಕ್ಯಾಂಟೀನ್’ಗಳನ್ನು ಕೆಲವರು ವಿರೋಧ ಮಾಡಿದರೂ, ನಾವು ಮುಂದುವರೆಸಿದ್ದೇವೆ. ಘೋಷಿತ ಉದ್ಯಾನವನ ಅಥವಾ ಮೈದಾನಗಳಲ್ಲಿ ಇಂದಿರಾ ಕ್ಯಾಂಟೀನ್’ ನಿರ್ಮಾಣವಾಗಿಲ್ಲ, ಬಿಬಿಎಂಪಿ ಖಾಲಿ ಜಾಗದಲ್ಲಿ ಮಾಡಲಾಗಿದೆ. ಆದರೂ ಕೆಲವರೂ ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ, ಎಂದು ಸಿಎಂ ರಾಜಕೀಯ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದಿರಾ ಹೆಸರು ಏಕೆ?

ಬಡತನದ ವಿರುದ್ಧ ಸಮರ ಘೋಷಿಸಿದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ. ಗರೀಭಿ ಹಟಾವೋ ದೇಶ್ ಬಚಾವೋ’ ಎಂಬ ಘೋಷಣೆ ಕೂಗಿದ ಇಂದಿರಾ ಗಾಂಧಿ ಹೆಸರು ಈ ಕ್ಯಾಂಟೀನ್’ಗೆ ಸೂಕ್ತವಾಗಿದೆ. ಹಸಿದವರಿಗೆ ಇದು ಅರ್ಥವಾಗುತ್ತದೆ, ಆದರೆ ರಾಜಕೀಯ ವಿರೋಧಿಗಳಿಗೆ ಅರ್ಥವಾಗಲ್ಲ ಎಂದು ಸಿಎಂ ಟಾಂಗ್ ನೀಡಿದ್ದಾರೆ.

ಮೋದಿ ವಿರುದ್ಧ ವಾಗ್ದಾಳಿ:

ಇಂದಿರಾ ಗಾಂಧಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಗೊಳಸಿ ರೈತರಿಗೆ ಬ್ಯಾಂಕುಗಳ ಬಾಗಿಲನ್ನು ತೆರೆದರು, ಆದರೆ ಮೋದಿಯವರು ನೋಟು ನಿಷೇಧ ಮಾಡುವ ಮೂಲಕ ರೈತರಿಗೆ ಬ್ಯಾಂಕುಗಳ ಬಾಗಿಲನ್ನು ಮುಚ್ಚಿ ಬಿಟ್ಟಿದ್ದಾರೆ, ಎಂದು ಸಿಎಂ ವಾಗ್ದಾಳಿ ನಡೆಸಿದರು. ಆರ್ಥಿಕತೆ ಸುಧಾರಿಸುತ್ತದೆ, ಕಪ್ಪು ಹಣ ವಾಪಾಸು ಬರುತ್ತದೆ ಎಂದು ಹೇಳಿದರು, ಆದರೆ ಎಷ್ಟು ಹಣ ಬಂದಿದೆ ಎಂದು ಅವರಿಗೇ ಗೊತ್ತಿಲ್ಲ ಎಂದು ಸಿಎಂ ಟೀಕಿಸಿದರು.