ನವದೆಹಲಿ: ತುರ್ತು ಸಂದರ್ಭಗಳಲ್ಲಿ ನಾಗರಿಕರು ಸಹಾಯ ಬೇಡುವುದಕ್ಕೆ ಅನುವು ಮಾಡಿಕೊಡಲು ಅಮೆರಿಕ ಹೊಂದಿರುವ ‘911’ ಮಾದರಿ ಎಮರ್ಜೆನ್ಸಿ ಸೇವೆ ಭಾರತದಲ್ಲಿ ಮುಂದಿನ ವಾರ ಚಾಲನೆ ಪಡೆದುಕೊಳ್ಳಲಿದೆ. 

ಪೊಲೀಸ್‌ (100), ಅಗ್ನಿಶಾಮಕ (101), ಆರೋಗ್ಯ (108) ಹಾಗೂ ಮಹಿಳಾ ಸಹಾಯವಾಣಿ (1090)ಗಳ ಬೇರೆ ಬೇರೆ ಸಂಖ್ಯೆಗಳನ್ನೆಲ್ಲಾ ವಿಲೀನಗೊಳಿಸಿ ‘112’ ಎಂಬ ತುರ್ತು ಸೇವಾ ಸಂಖ್ಯೆಯನ್ನು ಭಾರತ ರೂಪಿಸಿದೆ. ಇದಕ್ಕೆ ದೇಶದ 14 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುಂದಿನ ವಾರ ಚಾಲನೆ ಸಿಗಲಿದೆ.

 ಯಾವುದೇ ರೀತಿಯ ಸಂಕಷ್ಟದ ಸಂದರ್ಭದಲ್ಲಿ ನೆರವು ಬೇಕೆಂದರೆ ನಾಗರಿಕರು ಈ ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು. ಲ್ಯಾಂಡ್‌ಲೈನ್‌ ಫೋನ್‌ನಿಂದ ಈ ಸಂಖ್ಯೆಗೆ ಡಯಲ್‌ ಮಾಡಿದರೆ ನೆರವು ಸಿಗಲಿದೆ. 

ಸ್ಮಾರ್ಟ್‌ ಫೋನ್‌ ಹೊಂದಿರುವವರು 3 ಬಾರಿ ಪವರ್‌ ಬಟನ್‌ ಒತ್ತಿದರೆ ಕರೆ ಹೋಗುತ್ತದೆ. ಇತರೆ ಫೋನ್‌ ಹೊಂದಿದವರು 5 ಅಥವಾ 9ನೇ ಸಂಖ್ಯೆಯನ್ನೇ ಹೆಚ್ಚು ಹೊತ್ತು ಒತ್ತಿ ಹಿಡಿದರೆ ಕರೆ ಕನೆಕ್ಟ್ ಆಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.