ಭಾರತೀಯರಿಗೆ ಅಮೆರಿಕ ಬಿಗ್ ಶಾಕ್

Indians with advanced degree may have to wait 151 years for green card
Highlights

ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸುವ ಕನಸು ಕಾಣುತ್ತಿರುವ ಅತ್ಯುನ್ನತ ಪದವಿ ಹೊಂದಿದ ಭಾರತೀಯರಿಗೆ ಖಾಸಗಿ ಸಂಸ್ಥೆಯ ಅಧ್ಯಯನವೊಂದು ಶಾಕ್‌ ನೀಡಿದೆ. 

ವಾಷಿಂಗ್ಟನ್‌: ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸುವ ಕನಸು ಕಾಣುತ್ತಿರುವ ಅತ್ಯುನ್ನತ ಪದವಿ ಹೊಂದಿದ ಭಾರತೀಯರಿಗೆ ಖಾಸಗಿ ಸಂಸ್ಥೆಯ ಅಧ್ಯಯನವೊಂದು ಶಾಕ್‌ ನೀಡಿದೆ. ಇಬಿ-2 ಕೋಟಾದಲ್ಲಿ ಗ್ರೀನ್‌ ಕಾರ್ಡ್‌(ಕಾಯಂ ಪೌರತ್ವ)ಗೆ ಅರ್ಜಿ ಸಲ್ಲಿಸುವವರಿಗೆ ಸದ್ಯಕ್ಕಂತೂ ಶಾಶ್ವತ ಪೌರತ್ವ ಸಿಗದು, ಅವರು 151 ವರ್ಷಗಳ ಕಾಲ ಕಾಯಬೇಕು ಎಂದು ಹೇಳಿದೆ. ಅಂದರೆ, ಅರ್ಜಿದಾರರಿಗೆ ಅವರು ಬದುಕಿರುವವರೆಗೂ ಅಮೆರಿಕದ ಕಾಯಂ ಪೌರತ್ವ ಲಭಿಸುವುದಿಲ್ಲ!

2017ರಲ್ಲಿ ಮಂಜೂರಾದ ಗ್ರೀನ್‌ಕಾರ್ಡ್‌ಗಳ ಸಂಖ್ಯೆ ಆಧಾರವಾಗಿಟ್ಟುಕೊಂಡು ವಾಷಿಂಗ್ಟನ್‌ ಮೂಲದ ಚಿಂತಕರ ಚಾವಡಿ ಸಂಸ್ಥೆಯಾಗಿರುವ ಕ್ಯಾಟೋ ಇನ್ಸ್‌ಟಿಟ್ಯೂಟ್‌ ಸಿದ್ಧಪಡಿಸಿರುವ ಈ ವರದಿ, ಅಮೆರಿಕದಲ್ಲಿರುವ ಭಾರತೀಯರಿಗೆ ಬೇಸರ ಮೂಡಿಸುವಂತಿದೆ.

ಅಮೆರಿಕ ಕಾಯಂ ಪೌರತ್ವಕ್ಕಾಗಿ ಭಾರತೀಯರು ಮೂರು ವಿಭಾಗದಲ್ಲಿ ಅರ್ಜಿ ಸಲ್ಲಿಸುತ್ತಾರೆ. ಅಸಾಧಾರಣ ಸಾಮರ್ಥ್ಯ ಹೊಂದಿರುವವರು ಇಬಿ-1 ವಿಭಾಗದಲ್ಲಿ ಅರ್ಜಿ ಹಾಕುತ್ತಾರೆ. ಅವರಿಗೆ ಆರು ವರ್ಷಗಳಲ್ಲಿ ಗ್ರೀನ್‌ ಕಾರ್ಡ್‌ ದೊರೆಯುತ್ತದೆ. ಅಸಾಧಾರಣ ಸಾಮರ್ಥ್ಯ ಹೊಂದಿರುವ ಭಾರತೀಯ ಗ್ರೀನ್‌ ಕಾರ್ಡ್‌ ಅರ್ಜಿದಾರರ ಸಂಖ್ಯೆ 34,824ರಷ್ಟಿದೆ. ಅವರ ಪತ್ನಿ, ಮಕ್ಕಳನ್ನೂ (48,754) ಸೇರಿಸಿದರೆ, ಇದು 83,578ಕ್ಕೆ ಏರುತ್ತದೆ.

ಮಿಕ್ಕಂತೆ ಸಾಮಾನ್ಯ ಪದವಿ ಪಡೆದಿರುವ ಭಾರತೀಯರು ಇಬಿ-3 ಕೋಟಾದಡಿ ಗ್ರೀನ್‌ಕಾರ್ಡ್‌ಗಾಗಿ 17 ವರ್ಷ ಕಾಯಬೇಕಾಗುತ್ತದೆ. ಇಂತಹ ಭಾರತೀಯ ಅರ್ಜಿದಾರರ ಸಂಖ್ಯೆ 54,892 ಇದ್ದು, ಅವರ ಪತ್ನಿ ಹಾಗೂ ಮಕ್ಕಳ (60,381) ಲೆಕ್ಕ ಹಿಡಿದರೆ ಒಟ್ಟು ಸಂಖ್ಯೆ 1,15,273 ಆಗುತ್ತದೆ.

ಆದರೆ ಸಮಸ್ಯೆ ಆಗಿರುವುದು ಉನ್ನತ ಪದವಿ ಗಳಿಸಿರುವ ಇಬಿ-2 ವಿಭಾಗದ ಗ್ರೀನ್‌ಕಾರ್ಡ್‌ ಅರ್ಜಿದಾರರಿಗೆ. ಅವರು ಗ್ರೀನ್‌ಕಾರ್ಡ್‌ಗಾಗಿ 151 ವರ್ಷ ಸವೆಸಬೇಕಾಗುತ್ತದೆ. ಕಾನೂನು ಏನಾದರೂ ಬದಲಾವಣೆ ಆಗದಿದ್ದರೆ ಗ್ರೀನ್‌ ಕಾರ್ಡ್‌ ಸಿಗುವ ಮೊದಲೇ ಅವರು ಮೃತಪಟ್ಟಿರುತ್ತಾರೆ ಎಂದು ಸಂಸ್ಥೆ ಹೇಳಿದೆ.

ಏಕೆಂದರೆ ಈ ವರ್ಗದ ಅರ್ಜಿದಾರರ ಸಂಖ್ಯೆ 2,16,684ರಷ್ಟಿದೆ. ಅವರ ಪತ್ನಿ, ಮಕ್ಕಳು 2,16,684ರಷ್ಟೇ ಇದ್ದಾರೆ. ಇಬ್ಬರ ಲೆಕ್ಕವನ್ನೂ ಕೂಡಿದಾಗ ಇಬಿ-2 ವಿಭಾಗದ ಅರ್ಜಿದಾರರ ಸಂಖ್ಯೆ ಬರೋಬ್ಬರಿ 4,33,369 ಆಗುತ್ತದೆ. ಕಳೆದ ವರ್ಷ ಈ ವಿಭಾಗದಲ್ಲಿ ಕೇವಲ 2,879 ಮಂದಿಗಷ್ಟೇ ಗ್ರೀನ್‌ಕಾರ್ಡ್‌ ಸಿಕ್ಕಿದೆ! ಆದರೆ ಇಬಿ-1 ವಿಭಾಗದಡಿ 13,082 ಹಾಗೂ ಇಬಿ-3 ವಿಭಾಗದ 6641 ಮಂದಿಗೆ ಗ್ರೀನ್‌ ಕಾರ್ಡ್‌ ದೊರೆತಿದೆ ಎಂದು ಸಂಸ್ಥೆ ವಿವರಿಸಿದೆ.

loader