ನವದೆಹಲಿ(ಮಾ.05): ಭಾರತದ ಜಲಾಂತರ್ಗಾಮಿ ನೌಕೆಯೊಂದು ತನ್ನ ಜಲಗಡಿಯನ್ನು ದಾಟಿ ಒಳನುಗ್ಗಿದೆ ಎಂಬ ಪಾಕಿಸ್ತಾನದ ಆರೋಪವನ್ನು ಭಾರತೀಯ ನೌಕಾಸೇನೆ ತಿರಸ್ಕರಿಸಿದೆ.

ಭಾರತದ ಜಲಾಂತರ್ಗಾಮಿ ನೌಕೆ ಗುಪ್ತವಾಗಿ ತನ್ನ ಜಲಗಡಿಯೊಳಗೆ ನುಸುಳಿದೆ ಎಂದಿದ್ದ ಪಾಕಿಸ್ತಾನ, ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿತ್ತು.

ಈ ಕುರಿತು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಭಾರತೀಯ ನೌಕಾಸೇನೆ, ಭಾರತೀಯ ನೌಕಾಪಡೆ ಎಂದಿಗೂ ಪಾಕ್ ಜಲಗಡಿಯನ್ನು ದಾಟಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಪಾಕ್ ಸುಳ್ಳು ವಿಡಿಯೋಗಳನ್ನು ಹರಿಬಿಡುವ ಮೂಲಕ ವಿಶ್ವ ಸಮುದಾಯವನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಆರೋಪಿಸಿದೆ.