ಇಂಡಿಯಾ ಕಿಂಗ್ಸ್‌ ಸಿಗರೇಟ್‌ ಪ್ಯಾಕೆಟ್‌ ಮೇಲೆ ಭಾರತ ಭೂಪಟ ಚಿತ್ರ ಬಳಸದಂತೆ ಐಟಿಸಿ ಕಂಪನಿಗೆ ನಿರ್ದೇಶಿಸುವಂತೆ ಕೋರಿ ಲಾಯರ್ಸ್  ಫಾರ್‌ ಟೋಬ್ಯಾಕೋ ಕಂಟ್ರೋಲ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆದಿದೆ.

ಬೆಂಗಳೂರು: ಐಟಿಸಿ ಕಂಪನಿಯು ‘ಇಂಡಿಯಾ ಕಿಂಗ್ಸ್‌ ’ ಬ್ರಾಂಡ್‌ನ ಸಿಗರೇಟ್‌ ಪೊಟ್ಟಣದ ಮೇಲೆ ಭಾರತದ ಭೂಪಟ ಚಿತ್ರ ಬಳಸುವುದರ ವಿರುದ್ಧ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಅರ್ಜಿದಾರರಿಗೆ ಹೈಕೋರ್ಟ್‌ ಸೂಚಿಸಿದೆ.

ಇಂಡಿಯಾ ಕಿಂಗ್ಸ್‌ ಸಿಗರೇಟ್‌ ಪ್ಯಾಕೆಟ್‌ ಮೇಲೆ ಭಾರತ ಭೂಪಟ ಚಿತ್ರ ಬಳಸದಂತೆ ಐಟಿಸಿ ಕಂಪನಿಗೆ ನಿರ್ದೇಶಿಸುವಂತೆ ಕೋರಿ ಲಾಯ​ರ್ಸ್ ಫಾರ್‌ ಟೋಬ್ಯಾಕೋ ಕಂಟ್ರೋಲ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್‌ ಅವರಿದ್ದ ವಿಭಾಗೀಯ ಪೀಠ, ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಸೂಚಿಸಿ ಅರ್ಜಿ ಇತ್ಯರ್ಥಪಡಿಸಿತು.

ಇಂಡಿಯಾ ಕಿಂಗ್ಸ್‌ ಸಿಗರೆಟ್‌ ಪ್ಯಾಕೆಟ್‌ಗಳ ಮೇಲೆ ಭಾರತದ ಭೂಪಟ ಬಳಕೆ ಮಾಡಲಾಗುತ್ತಿದೆ. ಇದು ಭಾರತಕ್ಕೆ ಅಗೌರವ ತೋರಿದಂತಾಗುತ್ತದೆ. ಆದ್ದರಿಂದ ಐಟಿಸಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸಿಗರೇಟ್‌ ಪೊಟ್ಟಣದ ಮೇಲೆ ಭಾರತದ ಭೂಪಟ ಬಳಸದಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.