ಗಡಿ ನಿಯಂತ್ರಣ ರೇಖೆಯಿಂದ 60 ಮೀಟರ್ ದೂರದಲ್ಲಿ ನೆರೆಯ ರಾಷ್ಟ್ರದ ಡ್ರೋಣ್ ಕಂಡುಬಂದಿತು. ಶನಿವಾರ ಸಂಜೆ 4.45ಕ್ಕೆ ಸೇನಾ ಪಡೆ ಅದನ್ನು ಹೊಡೆದುರುಳಿಸಿದೆ. ಅದರ ಅವಶೇಷಗಳು ರಖರಿ ಸೆಕ್ಟರ್‌ನಲ್ಲಿರುವ ಅಘೈ ಪೋಸ್ಟ್‌ನಲ್ಲಿ ಚದುರಿ ಬಿದ್ದಿವೆ- ಲೆ.ಜ.ಸಲೀಮ್ ಬಾಜ್ವಾ (ಪಾಕ್ ಸೇನೆಯ ವಕ್ತಾರ)
ಶ್ರೀನಗರ(ನ.19): ದೇಶದ ಗಡಿ ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಡ್ರೋಣ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನ ಸೇನೆ ಶನಿವಾರ ಹೇಳಿಕೊಂಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪಾಕ್ ಸೇನೆಯ ವಕ್ತಾರ ಲೆ.ಜ.ಸಲೀಮ್ ಬಾಜ್ವಾ ಗಡಿ ನಿಯಂತ್ರಣ ರೇಖೆಯಿಂದ 60 ಮೀಟರ್ ದೂರದಲ್ಲಿ ನೆರೆಯ ರಾಷ್ಟ್ರದ ಡ್ರೋಣ್ ಕಂಡುಬಂದಿತು. ಶನಿವಾರ ಸಂಜೆ 4.45ಕ್ಕೆ ಸೇನಾ ಪಡೆ ಅದನ್ನು ಹೊಡೆದುರುಳಿಸಿದೆ. ಅದರ ಅವಶೇಷಗಳು ರಖರಿ ಸೆಕ್ಟರ್ನಲ್ಲಿರುವ ಅಘೈ ಪೋಸ್ಟ್ನಲ್ಲಿ ಚದುರಿ ಬಿದ್ದಿವೆ ಎಂದು ಅವರು ಬರೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಭಾರತೀಯ ಸೇನೆ ಈ ಅಂಶವನ್ನು ಪುಷ್ಟೀಕರಿಸಿಲ್ಲ.
ಈ ನಡುವೆ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಸೇನಾಪಡೆಗಳು ಉಗ್ರನನ್ನು ಗುಂಡಿಕ್ಕಿ ಕೊಂದಿವೆ. ಬೇಗಂಭಾಗ್ ಎಂಬ ಗ್ರಾಮದಲ್ಲಿ ಉಗ್ರರಿದ್ದಾರೆ ಎಂಬ ಸುಳಿವರಿತ ಸೇನಾಪಡೆಗಳು ಶೋಧ ಕಾರ್ಯ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
ಈ ನಡುವೆ, ಪಾಕಿಸ್ತಾನದ ಸೇನಾಪಡೆಗಳು ನೌಶೇರಾ ಮತ್ತು ಸುಂದರ್ಬಾನಿ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘಿಸಿ ಗುಂಡು ಹಾರಿಸಿದ್ದರಿಂದ ಬಿಎಸ್ಎಫ್ ಯೋಧ, ಮಹಿಳೆ ಗಾಯಗೊಂಡಿದ್ದಾರೆ.
