ನವದೆಹಲಿ[ಜೂ.24]: ಸಹೋದ್ಯೋಗಿಯ ಪತ್ನಿಯ ಕೊಲೆಯ ಆರೋಪದಲ್ಲಿ ಸೇನೆಯ ಮೇಜರ್ ಒಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಮೇಜರ್ ನಿಖಿಲ್ ಹಂಡಾ ಬಂಧಿತ ಆರೋಪಿ. ಮೇಜರ್ ಅಮಿತ್ ದ್ವಿವೇದಿ ಅವರ ಪತ್ನಿ ಶೈಲಜಾ ದ್ವಿವೇದಿ ಅವರನ್ನು ಕೊಲೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ. ಹಂಡಾ ಕೊಲೆಯಾದ ದ್ವಿವೇದಿ ದಂಪತಿಯ ಸ್ನೇಹಿತರಾಗಿದ್ದು ಮೀರತ್'ನಲ್ಲಿ ಬಂಧಿಸಲಾಗಿದೆ.

ಹತ್ಯೆಗೀಡಾದ ಶೈಲಜಾ ದ್ವಿವೇದಿ ಮೃತದೇಹ  ಶನಿವಾರ ಬೆಳಿಗ್ಗೆ ನೈರುತ್ಯ ರೈಲ್ವೆಯ ಕಂಟೋನ್ಮೆಂಟ್ ಪ್ರದೇಶದಲ್ಲಿ ಕತ್ತು ಸೀಳಿದ ರೀತಿಯಲ್ಲಿ ಪತ್ತೆಯಾಗಿತ್ತು. ಶನಿವಾರ ಬೆಳಿಗ್ಗೆ ಫಿಜಿಯೋ ಥೆರಪಿಗೆಂದು ಸ್ಥಳೀಯ ಆಸ್ಪತ್ರೆಗೆ  11 ಗಂಟೆ ಸಮಯದಲ್ಲಿ ಮನೆಯಿಂದ ಹೊರಟ ಶೈಲಜಾ ಕೇವಲ ಅರ್ಧ ಗಂಟೆಯ ನಂತರದಲ್ಲಿಯೇ ಆಸ್ಪತ್ರೆಯ ಸನಿಹದಲ್ಲಿಯೇ ಕೊಲೆಯಾಗಿದ್ದಾರೆ. ಪೊಲೀಸರ ಪ್ರಾಥಮಿಕ ವರದಿಗಳ ಪ್ರಕಾರ ಆಸ್ಪತ್ರೆಯಿಂದ ಹಂಡಾ ಅವರೆ ಶೈಲಜಾ ಅವರನ್ನು ತಮ್ಮ ಕಾರಿನಲ್ಲಿ ಕರೆದುಕೊಂಡ ಹೋದ ಕೆಲ ನಿಮಿಷಗಳಲ್ಲಿಯೇ ಹತ್ಯೆಯಾಗಿದ್ದಾರೆ.

ನಿಖಿಲ್ ಹಂಡಾರನ್ನು ಇತ್ತೀಚಿಗಷ್ಟೆ ಮೀರತ್'ನಿಂದ ನಾಗಲ್ಯಾಂಡಿನ ದಿಮಾಪುರ್ ಪ್ರದೇಶಕ್ಕೆ ವರ್ಗಾವಣೆಗೊಳಿಸಲಾಗಿತ್ತು. 2 ತಿಂಗಳ ಹಿಂದೆಯಷ್ಟೆ ಮೇಜರ್ ಅಮಿತ್ ದಂಪತಿಗಳನ್ನು ಪರಿಚಯ ಮಾಡಿಕೊಂಡಿದ್ದರು.