ಜಮ್ಮು-ಕಾಶ್ಮೀರದಲ್ಲಿ ಹಿಜ್ಬುಲ್‌ ಮುಜಾಹಿದೀನ್‌ ಉಗ್ರರು ಮೂವರು ಪೊಲೀಸರನ್ನು ಮನೆಗಳಿಗೇ ನುಗ್ಗಿ ಗುಂಡಿಟ್ಟು ಕೊಂದ ಘಟನೆಗೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರು ಕಿಡಿಕಾರಿದ್ದಾರೆ.

ನವದೆಹಲಿ. (ಸೆ. 23): ಜಮ್ಮು-ಕಾಶ್ಮೀರದಲ್ಲಿ ಹಿಜ್ಬುಲ್‌ ಮುಜಾಹಿದೀನ್‌ ಉಗ್ರರು ಮೂವರು ಪೊಲೀಸರನ್ನು ಮನೆಗಳಿಗೇ ನುಗ್ಗಿ ಗುಂಡಿಟ್ಟು ಕೊಂದ ಘಟನೆಗೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರು ಕಿಡಿಕಾರಿದ್ದಾರೆ.

 ಜಮ್ಮು-ಕಾಶ್ಮೀರದಲ್ಲಿ ಅನಾಗರಿಕ ಕೃತ್ಯಗಳನ್ನು ಪ್ರಚೋದಿಸುತ್ತಿರುವ ಪಾಕಿಸ್ತಾನ ಸೇನೆ ಹಾಗೂ ಉಗ್ರರಿಗೆ ತಿರುಗೇಟು ನೀಡುವ ಸಮಯ ಇದೀಗ ಒದಗಿ ಬಂದಿದೆ ಎಂದು ರಾವತ್‌ ಅವರು ಹೇಳಿದ್ದಾರೆ.

ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾವತ್‌ ಅವರು, ‘ಕಣಿವೆ ರಾಜ್ಯದಾದ್ಯಂತ ಬರ್ಬರ ಕೃತ್ಯಗಳನ್ನು ಎಸಗುತ್ತಿರುವ ಪಾಕಿಸ್ತಾನ ಸೇನೆ ಹಾಗೂ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಮಯ ಬಂದಿದೆ. 

ಆದರೆ, ಅವರು ಹಿಡಿದ ಅನಾಗರಿಕ ಮಾರ್ಗ ನಾವು ಹಿಡಿಯುವುದಿಲ್ಲ. ಆದಾಗ್ಯೂ, ಅವರಿಗೆ ತಕ್ಕ ಪ್ರತಿಕ್ರಿಯೆ ನೀಡಲಾಗುತ್ತದೆ,’ ಎಂದು ಪಾಕಿಸ್ತಾನದ ವಿರುದ್ಧ ಗುಡುಗಿದರು. ಇನ್ನು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಜೊತೆಗಿನ ಮಾತುಕತೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಭಯೋತ್ಪಾದನೆ ಹಾಗೂ ಶಾಂತಿ ಮಾತುಕತೆ ಒಟ್ಟಾಗಿ ನಡೆಯಲು ಸಾಧ್ಯವಿಲ್ಲ ಎಂದರು. 

ಈ ಮೂಲಕ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಜೊತೆ ಮಾತುಕತೆ ರದ್ದುಗೊಳಿಸಿದ ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡರು. ಅಲ್ಲದೆ, ಪಾಕಿಸ್ತಾನ ಮೊದಲು ಭಯೋತ್ಪಾದನೆಯನ್ನು ಬುಡಮೇಲು ಮಾಡಬೇಕು ಎಂದು ಆಗ್ರಹಿಸಿದರು.