ನವದೆಹಲಿ/ಬರ್ನ್‌[ಅ.03]: ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್‌ ಮೋದಿ ಹಾಗೂ ಅವರ ಪತ್ನಿ ಮಿನಾಲ್‌ ಮೋದಿ ಅವರು ಸ್ವಿಜರ್ಲೆಂಡ್‌ನಲ್ಲಿ ಹೊಂದಿರುವ ಖಾತೆಗಳ ವಿವರವನ್ನು ನೀಡುವಂತೆ ಸ್ವಿಜರ್ಲೆಂಡ್‌ ಸರ್ಕಾರಕ್ಕೆ ಭಾರತ ಕೋರಿಕೆ ಇಟ್ಟಿದೆ. ಇದರ ಬೆನ್ನಲ್ಲೇ ಸ್ವಿಜರ್ಲೆಂಡ್‌ ಸರ್ಕಾರ ಲಲಿತ್‌ ಮೋದಿ ದಂಪತಿಗೆ ಸಾರ್ವಜನಿಕ ನೋಟಿಸ್‌ ನೀಡಿದೆ.

ಅ.1ರಂದು ಎರಡು ನೋಟಿಸ್‌ಗಳನ್ನು ಹೊರಡಿಸಿರುವ ಸ್ವಿಸ್‌ ಸರ್ಕಾರ, 10 ದಿನಗಳಲ್ಲಿ ಅಧಿಕೃತ ಪ್ರತಿನಿಧಿಗಳನ್ನು ನೇಮಿಸಿ ವಿವರಣೆ ನೀಡುವಂತೆ ಸೂಚನೆ ನೀಡಿದೆ.

2010ರಿಂದ ಭಾರತ ತೊರೆದು ಲಂಡನ್‌ನಲ್ಲಿ ನೆಲೆಸಿರುವ ಲಲಿತ್‌ ಮೋದಿ ಅವರು ಈಗಾಗಲೇ ಅಕ್ರಮ ಹಣ ವರ್ಗಾವಣೆ ಪ್ರಕರಣ ಎದುರಿಸುತ್ತಿದ್ದಾರೆ. ಇದೀಗ ಕಪ್ಪು ಹಣದ ಸಂಕಷ್ಟಕೂಡ ಅವರಿಗೆ ಎದುರಾಗಿದೆ.

2016ರಲ್ಲಿ ಕೂಡ ಲಲಿತ್‌ ಮೋದಿ ದಂಪತಿ ವಿರುದ್ಧ ಇದೇ ರೀತಿ ಸ್ವಿಜರ್ಲೆಂಡ್‌ ಸರ್ಕಾರ ನೋಟಿಸ್‌ ಜಾರಿಗೊಳಿಸಿತ್ತು. ಅದಕ್ಕೆ ಅವರು ಯಾವ ಉತ್ತರ ನೀಡಿದ್ದರು ಎಂಬುದು ತಿಳಿದುಬಂದಿಲ್ಲ. ಭಾರತ ಹಾಗೂ ಸ್ವಿಜರ್ಲೆಂಡ್‌ ಸರ್ಕಾರದ ನಡುವೆ ಏರ್ಪಟ್ಟಿರುವ ಸ್ವಯಂ ಮಾಹಿತಿ ವಿನಿಮಯ ಒಪ್ಪಂದದಡಿ ಇದೀಗ ಭಾರತ ಮಾಹಿತಿ ಕೇಳಿದೆ.